ಶ್ರೀಮಂಗಲ, ಮಾ. 17: ಕೊಡಗು ಮಾತ್ರವಲ್ಲದೆ ರಾಜ್ಯ, ಅಂತರ್ರಾಜ್ಯಗಳ ಭಕ್ತಾದಿಗಳನ್ನು ಸೆಳೆಯುತ್ತಿರುವ ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವಕ್ಕೆ ಭಕ್ತಿ ಭಾವದೊಂದಿಗೆ ಸಂಭ್ರಮದ ತೆರೆ ಬಿದ್ದಿದೆ. ತಾ. 7ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊಂಡ ವಾರ್ಷಿಕ ಉತ್ಸವದ ಅಂತಿಮ ದಿನವಾದ ಇಂದು ದೇವರ ಅವಭೃತ ಸ್ನಾನ ಮತ್ತಿತರ ಕೈಂಕರ್ಯಗಳು ನೆರವೇರಿದವು.

ಬೆಳಿಗ್ಗೆಯಿಂದ ನಿತ್ಯಪೂಜೆ ಆರಂಭಗೊಂಡು 360 ಮೃತ್ಯುಂಜಯ ಹೋಮದೊಂದಿಗೆ ತುಲಾಭಾರ, ರುದ್ರಾಭಿಷೇಕ ಮತ್ತಿತರ ಕೈಂಕರ್ಯಗಳಲ್ಲಿ ಭಕ್ತಾದಿಗಳು ತೊಡಗಿಸಿಕೊಂಡಿದ್ದರು. ಅನ್ನ ಸಂತರ್ಪಣೆಯ ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬದ ಕಟ್ಟನ್ನು ಮುರಿಯಲಾಯಿತು. ಸಂಜೆ ದೇವರ ದರ್ಶನದೊಂದಿಗೆ ಸುಮಾರು ಎರಡೂವರೆ ಕಿಲೋಮೀಟರ್ ದೂರದಲ್ಲಿರುವ ಕಕ್ಕಟ್ಟ್ ಹೊಳೆಯಲ್ಲಿ ದೇವರ ಅವಭೃತ ಸ್ನಾನದೊಂದಿಗೆ 3 ಸುತ್ತಿನ ಪ್ರದಕ್ಷಿಣೆ ಬಳಿಕ ದೇವರ ದರ್ಶನಕ್ಕೆ ತೆರೆಬಿತ್ತು. ಬಳಿಕ ವಸಂತಪೂಜೆಯೊಂದಿಗೆ ತಡರಾತ್ರಿಯ ವೇಳೆಗೆ ವಾರ್ಷಿಕೋತ್ಸವ ಮುಕ್ತಾಯಗೊಂಡಿತು.

(ಮೊದಲ ಪುಟದಿಂದ) ಮರೆನಾಡ್ ಸ್ಪೋಟ್ರ್ಸ್ ಕ್ಲಬ್‍ನ ವತಿಯಿಂದ ಪ್ರಸಾದ ವಿತರಣೆ ಹಾಗೂ ಮೃತ್ಯುಂಜಯ ದೇವಾಲಯ ಸಮಿತಿ ಹಾಗೂ ಮಲ್ಲೇಂಗಡ ಸುರೇಶ್ ಪ್ರಾಯೋಜಕತ್ವದಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಗಮನ ಸೆಳೆಯಿತು. ಮೃತ್ಯುಂಜಯ ಪೂಜೆಯ ಸಂದರ್ಭ ರಾಮನಗರ ಕನಕಪುರದಿಂದ ಆಗಮಿಸಿದ್ದ ಮಹಿಳಾ ಭಕ್ತಾದಿಗಳು ಭಜನೆಯಲ್ಲಿ ನಿರತರಾಗಿದ್ದು ಕಂಡುಬಂದಿತು. ನಾಪೋಕ್ಲುವಿನ ಮಾರಿಯಮ್ಮ ನೃತ್ಯ ಕಲಾಲಯ ತಂಡದಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.

ತಾ. 16ರಂದು ಎತ್ತು ಪೋರಾಟ ನೆರಪು ಕೈಂಕರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ನಾಡ್ ತಕ್ಕರಾದ ಕಾಯಪಂಡ ಕುಟುಂಬದವರು, ದೇವತಕ್ಕರಾದ ಅಣ್ಣೀರ ಕುಟುಂಬದವರು ನಾಡಿನ ಇತರ ಸಂಬಂಧಿಸಿದವರು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಚೋನೀರ ಸುಬ್ರಮಣಿ ಹಾಗೂ ಇತರ ಪದಾಧಿಕಾರಿಗಳು ಉತ್ಸವದ ಯಶಸ್ಸಿನಲ್ಲಿ ಭಾಗಿಗಳಾಗಿದ್ದರು. ದೇವಾಲಯದ ಅರ್ಚಕರಾದ ಗಿರೀಶ್ ಹಾಗೂ ಹರೀಶ್ ಅವರ ನೇತೃತ್ವದಲ್ಲಿ ಪೂಜಾ ವಿಧಿ - ವಿಧಾನಗಳು ನೆರವೇರಿದವು.