ನಾಪೋಕ್ಲು ನಾಡು ಕೊಳಕೇರಿ ಗ್ರಾಮದ ಬಿದ್ದಾಟಂಡ ಒಕ್ಕದ ಗುರು ಕಾರೋಣರಾದ ಪೊನ್ನಣ್ಣನವರು ರಾಜರ ಕಾಲದಲ್ಲಿ ಅರವತ್ತೈದು ತಂತ್ರ ವಿದ್ಯೆ ಕಲಿತು ರಾಜರ ಆಸ್ಥಾನದಲ್ಲಿ ಸೇನಾಧಿಪತಿಯಾಗಿದ್ದರು. ಆ ಕಾಲದಲ್ಲಿ ಕೇರಳದ ಕರಣೆಬಾಹು ಎಂಬ ಪಾಳೇಗಾರನು ಕೊಡಗಿನ ಅರಸರಿಗೆ ಕಿರುಕುಳ ಕೊಡುತ್ತ ಪ್ರಜೆಗಳನ್ನು ಲೂಟಿ ಮಾಡುತ್ತಿದ್ದನು. ಅದನ್ನು ಸಹಿಸಲಿಕ್ಕಾಗದೆ ರಾಜನು ತನ್ನ ಆಸ್ಥಾನದಲ್ಲಿ ಸೇನಾಧಿಪತಿ ಯಾಗಿದ್ದ ವೀರನು, ಶೂರನು ಆದ ಬಿದ್ದಾಟಂಡ ಪೊನ್ನಣ್ಣನವರಿಗೆ ಅವನನ್ನು ಹುಡುಕಿ ಕೊಲ್ಲಲು ಆದೇಶವಿತ್ತನು. ಆಗ ಪೊನ್ನಣ್ಣನ ಸತತ ಪ್ರಯತ್ನ ಮತ್ತು ಅರವತ್ತೈದು ಮಂತ್ರ ವಿದ್ಯೆಯ ಪಾಂಡಿತ್ಯದಿಂದ, ಕರಣೆಬಾಹುಅನ್ನು ಈಗ ಸುಂಟಿಕೊಪ್ಪದ ಉಲುಗುಲಿ ಎಂಬ ಜಾಗದಲ್ಲಿ ಪತ್ತೆಮಾಡಿ ವಧಿಸ ಲಾಯಿತು. ಹಾಗೆಯೇ ಬಿದ್ದಾಟಂಡ ಪೊನ್ನಣ್ಣ ರಾಜ್ಯ ಪ್ರಶಸ್ತಿಗೆ ಅರ್ಹನಾಗಿ ತನ್ನ ಮಂತ್ರವಿದ್ಯೆಯ ತಂತ್ರದಿಂದ ರಾಜನಿಗಿಂತ ಉತ್ತಮನಾಗಿ ಮೆರೆಯುತ್ತಾನೆಂದು ಕೆಲವು ಶತ್ರುಗಳ ಚಾಡಿ ಮಾತಿನಿಂದ ರಾಜನು ಪ್ರೇರಣೆಗೊಂಡು, ಪೊನ್ನಣ್ಣನನ್ನು ಹಾಗೂ ಅವನ ಜೊತೆಯಲ್ಲಿದ್ದ ಹತ್ತು ಮಂತ್ರದ ಗೆಳೆಯರನ್ನು ಮೋಸದಿಂದ ಕೊಲ್ಲಿಸಲಾಯಿತು. ಈಗಾಗಲೇ ಕೆಲವು ವರ್ಷಗಳ ಹಿಂದೆ ಬಿದ್ದಾಟಂಡ ಹಿರಿಯರು ಪೊನ್ನಣ್ಣನಿಗೆ ನಿರ್ಮಿಸಿದ್ದ ಗುಡಿ ಒಂದು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿ ಪೂಜೆ ಪುನಸ್ಕಾರಗಳು ನಿಂತು ಹೋಗಿದ್ದವು. ಅದನ್ನು ಮನಗಂಡ ಬಿದ್ದಾಟಂಡ ಈಗಿನ ಕುಟುಂಬಸ್ಥರು, ನೆಂಟರಿಷ್ಟರು ಹಾಗೂ ಊರಿನವರು ಎಲ್ಲ ಓಟ್ಟಾಗಿ ಸೇರಿ, ಹೊಸ ಗುಡಿಯನ್ನು ನಿರ್ಮಿಸಿ, ನೆಲದಡಿಯಲ್ಲಿ ಸಿಕ್ಕಿದ ಪೊನ್ನಣ್ಣ ಹಾಗೂ ಅವನ ಹತ್ತುಜನ ತಂತ್ರ, ಮಂತ್ರ ಗೆಳೆಯರಾದ, ಚಾಮುಂಡಿ, ವಿಷ್ಣುಮೂರ್ತಿ, ಭದ್ರಕಾಳಿ, ಉಚ್ಚ ಕುಟ್ಟಿಚಾತ, ಭೈರವ, ಪೊಟ್ಟ, ಕರಿವಾಳ, ಗುಳಿಗ, ಬೇಟೇ ಕೂರುಮಗನ್, ಕೊರ್ತಿ, ಮೂರ್ತಿ ಗಳನ್ನು ಪುನಪ್ರತಿಷ್ಠಾಪ&divound; Éಗೊಳಿಸಲಾಯಿತು.

ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಮೂರೂ ದಿವಸದ ಮಟ್ಟಿಗೆ ಕೇರಳದ ಪ್ರಖ್ಯಾತ ತಂತ್ರಿಗಳಾದ ಕಾಲಿಘಾಟ್ ನಾರಾಯಣ ನಂಬೂದರಿ ಮತ್ತು ಅವರ ತಂಡದವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಹಾಗೂ ಬಿದ್ದಾಟಂಡ ಒಕ್ಕದ ಪಟ್ಟೇದಾರರಾದ ಬಿ.ಸಿ. ಪೊನ್ನಪ್ಪ, ಬಿದ್ದಾಟಂಡ ತಮ್ಮಯ್ಯ, ದೀಪಕ್ ತಿಮ್ಮಯ್ಯ ಮತ್ತು ನಿಡುಮಂಡ ಕುಟುಂಬಸ್ಥರು ಪಾಲ್ಗೊಂಡಿದ್ದರು.