ಮಡಿಕೇರಿ, ಮಾ. 18: ಮಡಿಕೇರಿಯಲ್ಲಿರುವ ಮೈದಾನಗಳೆಲ್ಲವನ್ನು ಕಟ್ಟಡಗಳು ನುಂಗುತ್ತಿವೆ..., ಇರುವ ಮೈದಾನಗಳನ್ನು ಉಳಿಸಿಕೊಳ್ಳಲು ಕ್ರೀಡಾಪ್ರೇಮಿಗಳು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಹೋರಾಟಕ್ಕಿಳಿದರೂ ಆಡಳಿತ ಯಂತ್ರಕ್ಕೆ ಆ ಸದ್ದು ಕೇಳುವದೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಅಳಿದುಳಿದಿರುವ ಮೈದಾನಗಳನ್ನು ರಕ್ಷಿಸಿಕೊಳ್ಳೋಣವೆಂದರೆ ಅಲ್ಲಿಯೂ ಸಮಸ್ಯೆಗಳ ರಾಶಿ..., ಸಂತ ಜೋಸೆಫರ ಶಾಲೆಯ ಬಳಿ ನಗರಸಭೆಗೆ ಸೇರಿದ ಮೈದಾನವೊಂದಿದೆ. ಇದು ಆಟೋಟಗಳಿಗಿಂತ ಹೆಚ್ಚಾಗಿ ಬಳಕೆಯಾಗುವದು ವಾಹನ ನಿಲುಗಡೆಗೆ. ಚುನಾವಣೆ ಸಂದರ್ಭ, ನಗರದ ರಸ್ತೆ ಇನ್ನಿತರ ಕಾಮಗಾರಿ ನಡೆಸುವ ಸಂದರ್ಭ ಇದು ವಾಹನ ನಿಲುಗಡೆ ಪ್ರದೇಶವಾಗಿರುತ್ತದೆ. ಪ್ರತಿನಿತ್ಯ ಸಂಜೆ ವೇಳೆಗೆ ಇಲ್ಲಿ ಕೆಲ ಮಕ್ಕಳು ಆಟವಾಡುತ್ತಾರೆ. ಆದರೆ ವಾಹನಗಳು ನಿಂತಿದ್ದಕ್ಕೆ ನಿರಾಸೆಯಿಂದ ಹಿಂತಿರುಗುತ್ತಾರೆ. ಇನ್ನು ರಾತ್ರಿ ವೇಳೆ ಪ್ರವಾಸಿಗರು, ನಗರದ ಕೆಲವು ಯುವ ಪಡೆಗಳಿಗೆ ಮೋಜಿನ ತಾಣವಾಗಿದೆ. ಕಸ - ಕಡ್ಡಿಗಳ ರಾಶಿಯೇ ತುಂಬಿರುತ್ತದೆ. ಇತ್ತೀಚೆಗೆ ಒಳಚರಂಡಿ ಕಾಮಗಾರಿ ಸಂದರ್ಭ ಲಾರಿ, ಟ್ರ್ಯಾಕ್ಟರ್‍ಗಳು ಇಲ್ಲಿ ಬೀಡು ಬಿಟ್ಟಿದ್ದಲ್ಲದೆ, ಜಲ್ಲಿ ಕಲ್ಲುಗಳನ್ನು ತುಂಬುವ ಸಲುವಾಗಿ ಮೈದಾನವನ್ನೇ ಅಗೆದು ಹಾಕಲಾಗಿದೆ. ಇಲ್ಲಿನ ದುಸ್ಥಿತಿಯ ಬಗ್ಗೆ ಇತ್ತೀಚೆಗೆ ‘ಶಕ್ತಿ' ಕಳಕಳಿಯ ವರದಿ ಪ್ರಕಟಿಸಿತ್ತು.
ಮುಕ್ತಿ
ಇದೀಗ ಇಂದು ನಗರಸಭೆ ವತಿಯಿಂದ ಈ ಮೈದಾನವನ್ನು ಶುಚಿಗೊಳಿಸಲಾಗಿದೆ. ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಕಸಗಳನ್ನು ಹೆಕ್ಕಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ನಗರಸಭೆಯೊಂದಿಗೆ ಸಾರ್ವಜನಿಕರು ಕೂಡ ಕೈಜೋಡಿಸಬೇಕಿದ್ದು, ಶಾಲಾಡಳಿತ ಕೂಡ ಇತ್ತ ಗಮನ ಹರಿಸಬೇಕಿದೆ. ಶಾಲಾ ಆವರಣದಂತೆ ಮೈದಾನವನ್ನೂ ಕೂಡ ಶುಚಿಯಾಗಿಟ್ಟುಕೊಳ್ಳುವಲ್ಲಿ ಕಸಗಳನ್ನು ಹಾಕದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶಾಲಾಡಳಿತ ಮಾಡಬೇಕಿದೆ.
-ಸಂತೋಷ್.