ಮಡಿಕೇರಿ ಮಾ. 18: ಸರಕಾರಿ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ಸಾಗಬೇಕಾದÀರೆ ಅದಕ್ಕೆ ಪೂರಕವಾಗಿ ಅಧಿಕಾರಿಗಳ ಲಭ್ಯತೆಯೂ ಇರಬೇಕು. ಆದರೆ ಕೊಡಗು ಜಿ.ಪಂ ನಲ್ಲಿ ಶೇ.71 ರಷ್ಟು ಹುದ್ದೆಗಳ ಕೊರತೆ ಇದೆ. ಈ ನಡುವೆಯೂ ಜನಪರ ಕಾಳಜಿಯಿಂದ ಅಭಿವೃದ್ಧಿ ಕಾರ್ಯಗಳು ಸಕಾಲದಲ್ಲಿ ನಡೆಯುತ್ತಿದೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಪತ್ರಿಕಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಿಬ್ಬಂದಿಗಳ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುವ ಬದಲು ಜಿಲ್ಲೆಯ ಪ್ರಗತಿಯ ಬಗ್ಗೆ ವಿಶ್ವಾಸದ ನುಡಿಗಳನ್ನಾಡಿದರು.
ಕೊಡಗು ಜಿ.ಪಂ.ಗೆ ಒಟ್ಟು 91 ಸಿಬ್ಬಂದಿಗಳ ಅಗತ್ಯವಿದೆ, ಆದರೆ ಕರ್ತವ್ಯ ನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 26, ಖಾಲಿ ಇರುವ ಹುದ್ದೆಗಳು 65. ತಾ.ಪಂ.ನಲ್ಲಿ 67 ಹುದ್ದೆಗಳ ಅಗತ್ಯವಿದ್ದು, 23 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರಪೇಟೆ ತಾ.ಪಂ ನಲ್ಲಿ 13 ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರೆ, ಮಡಿಕೇರಿ ಮತ್ತು ವಿರಾಜಪೇಟೆ ತಾ.ಪಂ ನಲ್ಲಿ ತಲಾ 5 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲಿರುವ 104 ಗ್ರಾ.ಪಂ ಗಳ ಪೈಕಿ 51 ಪಿಡಿಒ ಹುದ್ದೆಗಳು ಖಾಲಿ ಇವೆ. ಪ್ರಥಮ ದರ್ಜೆ ಹುದ್ದೆಗಳ ಸಂಖ್ಯೆ 33 ಇದ್ದು, 18 ಹುದ್ದೆಗಳು ಭರ್ತಿಯಾಗಬೇಕಾಗಿದೆ. ದ್ವಿತೀಯ ದರ್ಜೆಯಲ್ಲಿ 71 ರಲ್ಲಿ 26 ಹುದ್ದೆಗಳು ಖಾಲಿ ಇವೆ. 37 ಲೆಕ್ಕಾಧಿಕಾರಿಗಳ ಹುದ್ದೆಯಲ್ಲಿ 10 ಹುದ್ದೆಗಳು ಭರ್ತಿಯಾಗಬೇಕಾಗಿದ್ದು, ಇಷ್ಟೊಂದು ಸಂಕಷ್ಟದ ಪರಿಸ್ಥಿತಿ ಇದ್ದರೂ ಜಿ.ಪಂ ಹಾಗೂ ತಾ.ಪಂ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಚಾರುಲತಾ ಸೋಮಲ್ ಸ್ಪಷ್ಟಪಡಿಸಿದರು.