ಶನಿವಾರಸಂತೆ, ಮಾ. 18: ನಮ್ಮ ಸಂವಿಧಾನದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ರಕ್ಷಣೆ ಇದೆಯಾದರೂ ಸ್ತ್ರೀಯರ ಮೇಲಿನ ದೌರ್ಜನ್ಯ, ಶೋಷಣೆ ಮಾತ್ರ ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಲೇಖಕಿ ನಯನತಾರಾ ಪ್ರಕಾಶ್ಚಂದ್ರ ವಿಷಾದಿಸಿದರು.
ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ವತಿಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಮಹಿಳೆಯರ ಬದುಕಿನಲ್ಲಿ ಭರವಸೆಯ ಬೆಳಕುಮೂಡಿಸಿ, ಸಮಸ್ಯೆಗಳನ್ನು ಎದುರಿಸುವಂತಹ ಧೈರ್ಯ, ಛಲ ಮೂಡಿಸುವ ನಿಟ್ಟಿನಲ್ಲಿ ಮಹಿಳಾ ದಿನಗಳು ಆಚರಿಸಲ್ಪಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮತಾ ಮಾತನಾಡಿ, ಒಕ್ಕೂಟಗಳ ನಿಯಮ, ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ‘ಎ’ದ ಅಧ್ಯಕ್ಷೆ ಭುವನೇಶ್ವರಿ ಹರೀಶ್ ಮಾತನಾಡಿ, ಮಹಿಳೆಯರ ಸಮಸ್ಯೆಗಳಿಗೆ ಮಹಿಳೆಯೇ ಸ್ಪಂದಿಸಬೇಕು ಎಂದರು.
ಮಹಿಳಾ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷೆ ಶಾಲಿನಿ, ಕಾರ್ಯದರ್ಶಿ ಕವಿತಾ, ಜಂಟಿ ಕಾರ್ಯದರ್ಶಿ ನಳಿನಿ, ಖಜಾಂಚಿ ಜುಬೈದಾ, ಸೇವಾ ಪ್ರತಿನಿಧಿ ಶೋಭಾವತಿ, ಭಾನು, ಉಪ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.