ಕುಶಾಲನಗರ, ಮಾ 18: ಕುಶಾಲನಗರ ಸಾರ್ವಜನಿಕ ಗ್ರಂಥಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

ಯುವಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಗ್ರಂಥಾಲಯ ಮುಂಭಾಗ ಸೇರಿ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ನಗರ ಬಿಜೆಪಿ ಕಾರ್ಯದರ್ಶಿ ಹೆಚ್.ಡಿ. ಶಿವಾಜಿ ಮಾತನಾಡಿ, ಗ್ರಂಥಾಲಯದ ವಿದ್ಯುತ್ ಬಾಪ್ತು ಪಾವತಿಗಾಗಿ ಚೆಸ್ಕಾಂಗೆ ಚೆಕ್ ನೀಡಲಾಗಿದೆ. ಚೆಕ್ ಮೂಲಕ ಹಣ ಪಡೆದುಕೊಳ್ಳಲು 7 ದಿನಗಳ ಕಾಲಾವಕಾಶವಿದೆ. ಆದರೆ ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಕಾಲಾವಧಿ ಮುಗಿದ ಬಳಿಕ ಚೆಕ್ ಬೌನ್ಸ್ ಆಗಿದೆ ಎಂದು ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದರು. ಕೂಡಲೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.

ಸರಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ದರ್ಶನ್ ಮಾತನಾಡಿ, ಪರೀಕ್ಷೆ ಪೂರ್ವ ತಯಾರಿಗಾಗಿ ಗ್ರಂಥಾಲಯಕ್ಕೆ ಆಗಮಿಸಿದರೆ ಇಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲ ಎದುರಾಗಿದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಕೆ.ಜಿ. ಮನು, ಉಪಾಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಯುವಮೋರ್ಚಾ ಕಾರ್ಯದರ್ಶಿ ನಿಡ್ಯಮಲೆ ದಿನೇಶ್ ಮತ್ತಿತರರು ಇದ್ದರು.