ಸೋಮವಾರಪೇಟೆ, ಮಾ. 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ಯಾವದೇ ಘೋಷಣೆ ಇಲ್ಲದಿರುವದನ್ನು ಖಂಡಿಸಿ ಸೋಮವಾರಪೇಟೆ ತಾಲೂಕಿನ ರೈತರ ಸಾಲ ಮನ್ನಾ ಹಾಗೂ ಬೆಳೆಗಾರರಿಗೆ ಪರಿಹಾರ ಧನವನ್ನು ಒದಗಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಲು ತಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ರಾಜ್ಯ ಬಜೆಟ್ ಪ್ರಸ್ತಾಪಗೊಂಡು, ಕೊಡಗಿನ ರೈತರು ಹಾಗೂ ಕಾಫಿ ಬೆಳೆಗಾರರಿಗೆ ಯಾವದೇ ವಿಶೇಷ ಘೋಷಣೆ ಮಾಡಿಲ್ಲ. ಇದನ್ನು ಪುನರ್‍ಪರಿಶೀಲಿಸಿ ಸಾಲ ಮನ್ನಾದೊಂದಿಗೆ ಬೆಳೆಗಾರರಿಗೆ ಕೃಷಿ ಫಸಲು ನಷ್ಟಕ್ಕೆ ಪರಿಹಾರ ಧನ ಕಲ್ಪಿಸಬೇಕೆಂದು ಕೋರುವ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.

ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿ, ಈ ಹಿಂದಿನ ಬಜೆಟ್‍ಗಳಲ್ಲೂ ತಲಾ ರೂ. 50 ಕೋಟಿ ಘೋಷಿಸಲ್ಪಟ್ಟರೂ ಪೂರ್ಣಪ್ರಮಾಣದ ಅನುದಾನ ಬಂದಿಲ್ಲ. ಸರ್ಕಾರದಿಂದ ತಾ.ಪಂ. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪರಿಣಾಮ ತಾಲೂಕು ಪಂಚಾಯಿತಿಗೂ ಅನುದಾನ ಬರುತ್ತಿಲ್ಲ. ಗ್ರಾ.ಪಂ. ಹಾಗೂ ಜಿ.ಪಂ.ಗೆ ಹಣ ಬರುತ್ತಿದ್ದು, ತಾ.ಪಂ. ಯಾರಿಗೂ ಬೇಡವಾದ ಕೂಸಾಗಿದೆ. ತಾಲೂಕಿನಲ್ಲಿನ ಆನೆ ಮಾನವ ಸಂಘರ್ಷ ತಡೆಗೂ ಸರ್ಕಾರ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಅಭಿಪ್ರಾಯಿಸಿದರು. ಇದಕ್ಕೆ ಸದಸ್ಯ ಮಣಿ ಉತ್ತಪ್ಪ ಸೇರಿದಂತೆ ಇತರ ಸದಸ್ಯರೂ ದನಿಗೂಡಿಸಿದರು.

ಈ ಸಂದರ್ಭ ಎದ್ದುನಿಂತ ಸದಸ್ಯ ಅನಂತ್‍ಕುಮಾರ್, ತಾ.ಪಂ. ಸದಸ್ಯರ ಮಾಸಿಕ ಗೌರವಧನವನ್ನು ಏರಿಸಲಾಗಿದೆ. ಈ ಬಗ್ಗೆ ಅಭಿನಂದನಾ ನಿರ್ಣಯವನ್ನೂ ಕೈಗೊಳ್ಳಬೇಕೆಂದು ಅಭಿಪ್ರಾಯಿಸಿದರು. ಇದಕ್ಕೆ ಇತರ ಸದಸ್ಯರು ವಿರೋಧ ವ್ಯಕ್ತಪಡಿಸಿ, ತಾ.ಪಂ.ಗೆ ಅನುದಾನವೇ ಬರುತ್ತಿಲ್ಲ. ಅಭಿನಂದನೆ ಏಕೆ? ಎಂದು ಪ್ರಶ್ನಿಸಿದರು. ಅಂತಿಮವಾಗಿ ಸಾಲಮನ್ನಾ ಮತ್ತು ಪರಿಹಾರಕ್ಕೆ ಸರ್ಕಾರಕ್ಕೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು.

ಇಲಾಖಾಧಿಕಾರಿಗಳ ಗೈರು-ಸದಸ್ಯರು ಗರಂ: ತಾ.ಪಂ.ನ ಸಾಮಾನ್ಯ ಸಭೆಗಳಿಗೆ 43 ಇಲಾಖೆಯ ಅಧಿಕಾರಿಗಳು ಭಾಗವಹಿಸಬೇಕಿದ್ದರೂ, ಕೇವಲ 16 ಅಧಿಕಾರಿಗಳು ಮಾತ್ರ ಬಂದಿದ್ದಾರೆ. ಇವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಲ್ಲಾ ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು.

ಅಬಕಾರಿ ಇಲಾಖಾಧಿಕಾರಿ ನಿರಂತರ ಗೈರಾಗಿದ್ದು, ಇವರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳ ಸಹಿತ ಸಚಿವರು ಹಾಗೂ ಇಲಾಖಾ ಕಮಿಷನರ್‍ಗೆ ದೂರು ನೀಡುವಂತೆ ತೀರ್ಮಾನಿಸಲಾಯಿತು. ಅಧಿಕಾರಿಗಳೇ ಇಲ್ಲದಿದ್ದ ಮೇಲೆ ಸಭೆಯನ್ನು ಮುಂದೂಡಿ ಎಂದು ಸದಸ್ಯ ಮಣಿ ಉತ್ತಪ್ಪ ಒತ್ತಾಯಿಸಿದರು.

ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬರೆಯಲಾಗುವದು ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ತಿಳಿಸಿದ ಮೇರೆ ಸಭೆ ಮುಂದುವರೆಯಿತು. ತಾ.ಪಂ. ಕಚೇರಿ ಸಿಬ್ಬಂದಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹಿಂದಿನ ಸಭೆಯ ಅನುಪಾಲನಾ ವರದಿಯನ್ನು ಸದಸ್ಯರಿಗೆ ಸಕಾಲಕ್ಕೆ ತಲುಪಿಸುತ್ತಿಲ್ಲ ಎಂದು ಸದಸ್ಯರುಗಳು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ತಿರುಗಿಬಿದ್ದು, ಆಕ್ರೋಶ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ: ಸೋಮವಾರಪೇಟೆ ತಾಲೂಕು ಬರಪೀಡಿತ ಎಂದು ಘೋಷಿಸಲ್ಪಟ್ಟಿದ್ದು, ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗೆ ಎಷ್ಟು ಅನುದಾನ ಬಂದಿದೆ? ಎಂದು ಸದಸ್ಯ ಮಣಿ ಉತ್ತಪ್ಪ, ತಂಗಮ್ಮ, ವಿಜು ಚಂಗಪ್ಪ, ಅಭಿಮನ್ಯುಕುಮಾರ್ ಪ್ರಶ್ನಿಸಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ರಮೇಶ್ ಉತ್ತರಿಸಿ 89.5 ಲಕ್ಷ ಅನುದಾನ ಬಂದಿದ್ದು, ಇದರಲ್ಲಿ 29 ಕಾಮಗಾರಿಗಳನ್ನು ಗುರುತಿಸಲಾಗಿದೆ. ಈಗಾಗಲೇ 14 ಕಾಮಗಾರಿ ಮುಕ್ತಾಯಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ. ಇದೀಗ ರೂ. 30 ಲಕ್ಷ ಅನುದಾನ ಬಂದಿದ್ದು ಇದಕ್ಕೆ ಕ್ರಿಯಾಯೋಜನೆ ತಯಾರಿಸಬೇಕಿದೆ ಎಂದರು.

ಕೂಡಿಗೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಸದಸ್ಯ ಗಣೇಶ್ ಸಭೆಯ ಗಮನಸೆಳೆದರು. ಬೋರ್‍ವೆಲ್ ಲಾರಿ ಯಾವಾಗಲೂ ರಿಪೇರಿ ಎಂಬ ಕಾರಣ ಲಭಿಸುತ್ತಿದ್ದು, ತಕ್ಷಣ ಅಂತಹ ಬೋರ್‍ಬೆಲ್ ಏಜೆನ್ಸಿಯನ್ನು ಸ್ಥಗಿತಗೊಳಿಸಿ ಬೇರೆ ಏಜೆನ್ಸಿಗೆ ಕಾಮಗಾರಿಗಳನ್ನು ವಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಕಲುಷಿತ ಕಾವೇರಿ: ಕಾವೇರಿ ನದಿಪಾತ್ರದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಕುಡಿಯಲು ಯೋಗ್ಯವಲ್ಲದ ನೀರೆಂದು ವರದಿಯಲ್ಲಿ ಹೇಳಲಾಗಿದೆ. ನದಿಯ ಶುಚಿತ್ವ ಕಾಪಾಡುವ ದಿಸೆಯಲ್ಲಿ ಕ್ರಮಕೈಗೊಳ್ಳುವಂತೆ ಎಲ್ಲಾ ಪಿಡಿಓಗಳಿಗೆ ಸೂಚಿಸಬೇಕೆಂದು ಸದಸ್ಯರುಗಳಾದ ವಿಜುಚಂಗಪ್ಪ, ಮಣಿ ಉತ್ತಪ್ಪ ಒತ್ತಾಯಿಸಿದರು.

199 ಮಂದಿಗೆ ಹಕ್ಕುಪತ್ರ: ತಾಲೂಕಿನಲ್ಲಿ 94 ಸಿ ಅಡಿಯಲ್ಲಿ 12,331 ಮಂದಿ ಅರ್ಜಿ ಸಲ್ಲಿಸಿದ್ದು, 199 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ತಾಲೂಕು ಕಚೇರಿಯ ಅರುಣ್‍ಕುಮಾರ್ ಸಭೆಯ ಗಮನಕ್ಕೆ ತಂದರು.

ಉಳಿದಂತೆ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು. ವೇದಿಕೆಯಲ್ಲಿ ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯರುಗಳಾದ ಪುಷ್ಪ, ಜಯಣ್ಣ, ಕುಶಾಲಪ್ಪ, ಕುಸುಮ, ಲೀಲಾವತಿ, ಬಿ.ಬಿ. ಸತೀಶ್, ವಿಮಲಾವತಿ, ಸುಹಾದ ಅಶ್ರಫ್, ಮಣಿ, ಸವಿತ ಅವರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.