ವೀರಾಜಪೇಟೆ, ಮಾ. 18 : ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹಳೆ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ತೆರೆದ ಬಾವಿಗಳ ದುರಸ್ತಿ, ಜಿಲ್ಲಾಧಿಕಾರಿಯ ಅನುಮತಿ ಮೇರೆ ಅಗತ್ಯವಿರುವೆಡೆಗಳಲ್ಲಿ ಬೋರ್‍ವೆಲ್ ತೆಗೆಯುವದು. ನೀರು ಅನವಶ್ಯಕವಾಗಿ ಪೋಲಾಗದಂತೆ ತಡೆಯಲು ವಿಶೇಷ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಪಟ್ಟಣದ ಶುಚಿತ್ವ ಹಾಗೂ ಕುಡಿಯುವ ನೀರಿನ ಕುರಿತು ಸದಸ್ಯರುಗಳ ನಡುವೆ ವಿಸ್ತøತ ಚರ್ಚೆ ನಡೆಯಿತು.

ವೀರಾಜಪೇಟೆ ತಾಲೂಕಿನಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ವಿಶೇಷ ಗಮನ ಹರಿಸುವಂತೆ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ, ಎಸ್.ಎಚ್.ಮತೀನ್, ಎಸ್.ಎಚ್.ಮೈನುದ್ದೀನ್ ಸಭೆಯ ಗಮನ ಸೆಳೆದರು. ನಾಮಕರಣ ಸದಸ್ಯರುಗಳಾದ ರಂಜಿ ಪೂಣಚ್ಚ, ಮಹಮ್ಮದ್ ರಾಫಿ ಇದಕ್ಕೆ ಧ್ವನಿಗೂಡಿಸಿದರು.

ಮೀನು, ಮಾಂಸ. ಸೇರಿದಂತೆ ಇತರ ಎಲ್ಲ ಅಗತ್ಯ ಸಾಮಗ್ರಿಗಳು ನಾಗರಿಕರಿಗೆ ಒಂದೇ ಸೂರಿನಲ್ಲಿ ದೊರಕುವಂತೆ ಮಾಡಲು ತುರ್ತಾಗಿ ಹೈಟೆಕ್ ಮಾರ್ಕೆಟ್ ಪ್ರಾರಂಭಿಸಲು ಒತ್ತು ನೀಡುವಂತೆ ಹಿರಿಯ ಸದಸ್ಯ ಕೆ.ಎನ್ ವಿಶ್ವನಾಥ್‍ಒತ್ತಾಯಿಸಿದಾಗ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಯಿತು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೊಸ ಎರಡು ಆ್ಯಂಬ್ಯುಲೆನ್ಸ್ ಅಗತ್ಯವಿದೆ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಕೆಲ ವೈದ್ಯರು, ಸಿಬ್ಬಂದಿಗಳು ಕ್ಷ-ಕಿರಣ ಸೌಲಭ್ಯದ ಫೋಟೋ ಪ್ರತಿಯನ್ನು ಹೊರಗಡೆಯಿಂದ ತರುವಂತೆ ತಿಳಿಸಿ ಕಿರುಕುಳ ನೀಡುತ್ತಿದ್ದಾರೆ. ಇದಕ್ಕಾಗಿ ಬಡ ರೋಗಿಗಳು ಹೊರಗಡೆ ರೂ 500 ದುಬಾರಿ ಹಣ ನೀಡಬೇಕಾಗುತ್ತದೆ ಎಂದು ಸದಸ್ಯೆ ನಾಗಮ್ಮ ದೂರಿದರು. ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಸಚಿನ್ ಪ್ರತಿಕ್ರಿಯಿಸಿದರು.

ಪಟ್ಟಣ ಪಂಚಾಯಿತಿಯಿಂದ ಕಾಮಗಾರಿ ಗುತ್ತಿಗೆಗೆ ಪಡೆದು ಸೂಕ್ತ ಸಮಯಕ್ಕೆ ಕಾಮಗಾರಿ ನಿರ್ವಹಿಸದೆ ; ಈ ಬಗ್ಗೆ ಪ್ರಶ್ನಿಸಿದ ಸದಸ್ಯರೊಂದಿಗೆ ಉಡಾಫೆಯಿಂದ ವರ್ತಿಸುವ ಗುತ್ತಿಗೆದಾರರನ್ನು ಬದಲಾಯಿಸುವಂತೆ ಸದಸ್ಯರುಗಳು ಅಧ್ಯಕ್ಷರನ್ನು ಒತ್ತಾಯಿಸಿದರು.

ಮೀನುಪೇಟೆ ರಸ್ತೆ ಬದಿಯಲ್ಲಿ ಹಾಗೂ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆಯ ಬಳಿಯಲ್ಲಿ ಈ ಭಾಗದಲ್ಲಿ ಸಂಚರಿಸುವ ಜನರಿಗೆ ರಕ್ಷಣೆ ಇಲ್ಲದಂತಹ ಬೇಲಿ ರಹಿತವಾದ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿದ್ದು ಇದು ಜನರಿಗೆ ಅಪಾಯದ ಅಂಚಿನಲ್ಲಿದೆ ಎಂದು ರಚನ್ ಮೇದಪ್ಪ ಸಭೆಗೆ ದೂರಿದರು. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವದು ಎಂದು ಸಚಿನ್ ತಿಳಿಸಿದರು. ಸದಸ್ಯ ಟಿ.ಜೆ.ಶಂಕರ್ ಶೆಟ್ಟಿ ಮಾತನಾಡಿ ಪಂಚಾಯಿತಿ ಕಚೇರಿಯಿಂದ ಸಾರ್ವಜನಿಕರು ಪಡೆಯುವ ದೃಢೀಕರಣ ಪತ್ರದ ಶುಲ್ಕ ಏರಿಕೆಗೆ ವಿರೋಧಿಸಿದರು. ಸಾರ್ವಜನಿಕರಿಗೆ ಅಗತ್ಯವಾದ ದೃಢೀಕರಣ ಪತ್ರವನ್ನು ವಿಳಂಬ ಮಾಡದೆ ಅರ್ಜಿ ಕೊಟ್ಟ ತಕ್ಷಣ ವಿತರಿಸಬೇಕು. ಕೆಲವು ಸಿಬ್ಬಂದಿಗಳು ಉದ್ದೇಶಪೂರ್ವಕವಾಗಿ ಅರ್ಜಿದಾರರನ್ನು ಅಲೆದಾಡಿಸುತ್ತಾರೆ. ಇಂತಹ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ.ಸುನೀತ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಎನ್.ಪಿ.ಹೇಮ್ ಕುಮಾರ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್, ಯೋಜನಾಧಿಕಾರಿ ಶೈಲಜಾ ಸಿಬ್ಬಂದಿಗಳು ಹಾಜರಿದ್ದರು.