ಮಡಿಕೇರಿ, ಮಾ. 18: ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ ಹಾಗೂ ತಲಕಾವೇರಿ ವಲಯದ ಗ್ರಾಮಗಳನ್ನು ಸೂಕ್ಷ್ಮ ವನ್ಯಜೀವಿ ಪರಿಸರ ಪ್ರದೇಶ ಘೋಷಣೆಯ ಪ್ರಸ್ತಾವನೆ ವಿರುದ್ಧ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ತಿದ್ದುಪಡಿ ಕೋರಿ ಮರು ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಸ್ಪಷ್ಟಪಡಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯ ಸರಕಾರ ಜಿಲ್ಲೆಯ ಜನತೆಯ ಭಾವನೆಗಳಿಗೆ ಸ್ಪಂದಿಸುವದಾಗಿ ಸ್ಪಷ್ಟಪಡಿಸಿದರು.
ಪರ-ವಿರೋಧ ಸಹಜ: ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಹಾಗೂ ಸ್ಟೋನ್‍ಹಿಲ್‍ನಲ್ಲಿ ಕಿರು ತಾರಾಲಯ ಸ್ಥಾಪನೆ ಕುರಿತು ಆಕ್ಷೇಪ ಕುರಿತು ಪ್ರತಿಕ್ರಿಯಿಸಿದ ಸಚಿವರು, ಯಾವದೇ ಕೆಲಸಕ್ಕೆ ಮುಂದಾದರೂ ಜಿಲ್ಲೆಯಲ್ಲಿ ಪರ-ವಿರೋಧ ಭಾವನೆಗಳು ಸಹಜವೆಂದು ಅಭಿಪ್ರಾಯಪಟ್ಟರು.
ನಗರದ ಒಳಚರಂಡಿ ಕಾಮಗಾರಿ ಗೊಂದಲ ಕುರಿತು ಗಮನ ಸೆಳೆದಾಗ, ನಗರಸಭಾ ಅಧ್ಯಕ್ಷರು ಸೇರಿದಂತೆ ಯಾರೊಬ್ಬರು ತಮ್ಮ ಬಳಿ ಪ್ರಸ್ತಾಪಿಸಿಲ್ಲವೆಂದು ಸಚಿವರು ನುಡಿದರಲ್ಲದೆ, ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ಕ್ರಮಕ್ಕಾಗಿ ನಿರ್ದೇಶಿಸಲಾಗುವದು ಎಂದರು.
ಕೊಡಗಿಗೆ ಆದ್ಯತೆ: ರಾಜ್ಯ ಮುಂಗಡ ಪತ್ರದಲ್ಲಿ ಕೊಡಗಿನ ಅಭಿವೃದ್ಧಿಗೆ ರೂ. 50 ಕೋಟಿ ಪ್ಯಾಕೇಜ್ ನೀಡಿದ್ದು, ವಿಮಾನ ಇಳಿದಾಣ, ಆರೋಗ್ಯಕ್ಕೆ ಒತ್ತು ನೀಡಿ ಜನತೆಯ ಅನುಕೂಲಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರೂ. 50 ಲಕ್ಷದ ರಕ್ತ ವಿದಳನ ಕೇಂದ್ರ ಹಾಗೂ ವೀರಾಜಪೇಟೆಯಲ್ಲಿ ನೂತನ ಕಾರಾಗೃಹ ನಿರ್ಮಿಸಲು ಆದ್ಯತೆ ನೀಡಿರುವದಾಗಿ ಸಚಿವರು ವಿವರಿಸಿದರು.
ಮಾಗಡಿ-ಸೋಮವಾರಪೇಟೆ ಮಾರ್ಗ 166 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸುವದು ಸೇರಿದಂತೆ, ಪ್ರಸಕ್ತ ಕುಡಿಯುವ ನೀರಿಗೆ ಯಾವದೇ ಸಮಸ್ಯೆ ಉಂಟಾಗದಂತೆ ಅಗತ್ಯ ಹಣ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಯಾರೂ ಬೇಡಿಕೆ ಸಲ್ಲಿಸಿಲ್ಲ: ಕೊಡಗಿನ ಕುಶಾಲನಗರವನ್ನು ಪ್ರತ್ಯೇಕ ತಾಲೂಕು ರಚನೆ ಕುರಿತು, ಕಳೆದ 9 ತಿಂಗಳಿನಿಂದ ತಮಗೆ ಯಾರೂ ಪ್ರಸ್ತಾವನೆ ಸಲ್ಲಿಸಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಮುಂಗಡ ಪತ್ರಕ್ಕೆ ಮುನ್ನ ಅರ್ಜಿ ಸಲ್ಲಿಸಿದ್ದರೆ ತಾವು ಮುಖ್ಯಮಂತ್ರಿಗಳ ಗಮನ ಸೆಳೆಯುತ್ತಿದ್ದುದಾಗಿ ಮಾರ್ನುಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಚಾರುಲತ ಸೋಮಲ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ನಿಗಮ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.