ಸಿದ್ದಾಪುರ, ಮಾ. 18: ಹಾಡಹಗಲೇ ಕಾಡಾನೆಯೊಂದು ಧಾಳಿ ನಡೆಸಿದ ಪರಿಣಾಮ ಕಾಫಿ ಬೆಳೆಗಾರರೊಬ್ಬರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಕಾಫಿ ಬೆಳೆಗಾರ ಪಟ್ಟಮಾಡ ನಂಜಪ್ಪ (72) ಎಂಬವರು ತೋಟದಲ್ಲಿ ಕೆಲಸ ಮಾಡಿಸುವ ಸಂದರ್ಭ ಕಾಡಾನೆ ಧಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಪರಿಣಾಮ ನಂಜಪ್ಪ ಅವರ ಬೆನ್ನಿನ ಮೂಳೆ ಮುರಿದಿದ್ದು, ಶರೀರಕ್ಕೆ ಗಾಯ ಉಂಟಾಗಿದೆ. ಗಾಯಗೊಂಡ ನಂಜಪ್ಪನವರು ಪ್ರಾಣಪಾಯದಿಂದ ಪಾರಾಗಿದ್ದು, ಗೋಣಿಕೊಪ್ಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಲಯ ಅರಣ್ಯಧಿಕಾರಿಗಳು ಭೇಟಿ ನೀಡಿದ್ದಾರೆ.

ಆರು ತಿಂಗಳ ಹಿಂದೆ ಮಗನ ಮೇಲೆ ದಾಳಿ !

ಕಳೆದ ಆರು ತಿಂಗಳ ಹಿಂದೆ ನಂಜಪ್ಪನವರ ಮಗ ವಿವಿನ್ ತೋಟದಲ್ಲಿ ಗಸ್ತು ತಿರುಗುತ್ತಿದ್ದ ಸಂದರ್ಭ ಕಾಡಾನೆ ಧಾಳಿ ನಡೆಸಿ ತುಳಿದ ಪರಿಣಾಮ ವಿವಿನ್ ಗಾಯಗೊಂಡಿದ್ದರು. ಇದು ಎರಡನೇ ಬಾರಿ ಧಾಳಿ ನಡೆಸಿದ ಕುಳ್ಳ ಆಕಾರದ ಕಾಡಾನೆ ತೋಟದಲ್ಲಿ ಬೀಡುಬಿಟ್ಟಿದ್ದು, ಕಾರ್ಮಿಕರು ಹಾಗೂ ಕಾಫಿ ಬೆಳೆಗಾರರು ಭಯಬೀತರಾಗಿ ದ್ದಾರೆಂದು ಕಾಫಿ ಬೆಳೆಗಾರ ಕೀತಿಯಂಡ ವಿವೇಕ್ ತಿಳಿಸಿದ್ದಾರೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿದೆಂದು ಆತಂಕ ವ್ಯಕ್ತಪಡಿಸಿದರು. ಹಲವು ವಾಹನಗಳ ಮೇಲೆ ದಾಳಿ ನಡೆಸಿದೆÀ ಎಂದು ಹೇಳಿದರು.

ಕಾರಿನ ಮೇಲೆ ಧಾಳಿ

ಸಿದ್ದಾಪುರ ಸಮೀಪದ ಘಟ್ಟದಳ ಹೇರೂರು ಕಾಫಿ ತೋಟದ ಸಮೀಪವಿರುವ ಯೋಗೇಂದ್ರ ರೈರವರಿಗೆ ಸೇರಿದ ಮಾರುತಿ ಆಲ್ಟೋ (ಕೆ.ಎ.04.ಎಂ.ಸಿ1093) ಕಾರನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಕಾರಿನ ಮೇಲೆ ಶುಕ್ರವಾರ ರಾತ್ರಿ ಕಾಡಾನೆಯೊಂದು ತನ್ನ ದಂತದಿಂದ ಗಾಜುಗಳನ್ನು ಹೊಡೆದು ಹಾನಿಗೊಳಿಸಿದ್ದು, ಕಾರು ಜಖಂಗೊಂಡಿದೆ. ಯೋಗೇಂದ್ರ ರೈ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿದ್ದಾರೆ.

ಸಿದ್ದಾಪುರ ವ್ಯಾಪ್ತಿಯ ಮಾಲ್ದಾರೆ, ಬಾಡಗ ಬಾಣಂಗಾಲ, ಗುಹ್ಯ, ಗ್ರಾಮದ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕಾರ್ಮಿಕರಿಗೆ ಕರಿಮೆಣಸು ಕೊಯ್ಲು ಮಾಡಲು ಭಯವಾಗುತ್ತಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.