ಚೆಟ್ಟಳ್ಳಿ, ಮಾ. 18: ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ 2016-2017 ಸಾಲಿನ ರಾಜ್ಯ ಹಾಗೂ ಜಿಲ್ಲಾಮಟ್ಟದ ಕಾಯಕಲ್ಪ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ.
ಸೋಮವಾರಪೇಟೆ ತಾಲೂಕು ಚೇರಳ-ಶ್ರೀಮಂಗಲ ಗ್ರಾಮಕ್ಕೆ ಒಳಪಡುವ ಚೆಟ್ಟಳ್ಳಿಯ ಸುಮಾರು 50 ವರ್ಷದ ಹಿಂದೆ ಪ್ರಾರಂಭವಾದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಮುಳ್ಳಂಡ ಕುಟುಂಬಸ್ಥರು ಸುಮಾರು 3.50 ಎಕರೆ ಜಾಗವನ್ನು ದಾನವಾಗಿ ನೀಡಿದ್ದರು. ಆಗಿನಿಂದ ಸರ್ಕಾರದ ಅಧೀನದಲ್ಲಿ ಪ್ರಾರಂಭವಾಗಿ ಉತ್ತಮ ಆರೋಗ್ಯ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದ್ದು, ಸರ್ಕಾರದ ಆದೇಶ ದನ್ವಯ ಆರೋಗ್ಯ ಕೇಂದ್ರವನ್ನು ಉನ್ನತ ದರ್ಜೆಗೆ ಏರಿಸಿ ಉತ್ತಮ ಸೌಲಭ್ಯವನ್ನು ನೀಡಿತ್ತು. ಸಾರ್ವಜನಿಕರ ಅನು ಕೂಲಕ್ಕಾಗಿ ಪ್ರಯೋಗ ಶಾಲೆಯ ಅವಶ್ಯಕತೆ ಯಿದ್ದುದರಿಂದ ಸ್ಥಳೀಯ ದಾನಿ ಗಳಾದ ಸೋಮೆಯಂಡ ದಿಲೀಪ್ ಅಪ್ಪಚ್ಚು ಅವರು ಸುಮಾರು 3 ವರ್ಷಗಳ ಹಿಂದೆ ಪ್ರಯೋಗ ಶಾಲೆಯ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದಾರೆ. 2016-17ರ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಆರೋಗ್ಯ ಕೇಂದ್ರಗಳಿಗೆ ನೀಡುವ ಕಾಯಕಲ್ಪ ಪ್ರಶಸ್ತಿಯ ಆಯ್ಕೆಗಾಗಿ ರಾಜ್ಯ ಹಾಗೂ ಜಿಲ್ಲಾಮಟ್ಟದ ಆರೋಗ್ಯ ಇಲಾಖೆಯ ಕಾಯಕಲ್ಪ ತಂಡ ಪ್ರತಿಯೊಂದು ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಆರೋಗ್ಯ ಕೇಂದ್ರದ ಪರಿಸರ, ಸ್ವಚ್ಛತೆ, ನೈರ್ಮಲ್ಯ ಹಾಗೂ ಹಲವು ಸೌಲಭ್ಯವನ್ನೆಲ್ಲ ಪರಿಶೀಲಿಸಿದಾಗ ಚೆಟ್ಟಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಅಂಕ ಬಂದಿದೆ.
- ಪುತ್ತರಿರ ಕರುಣ್ ಕಾಳಯ್ಯ