ಮಡಿಕೇರಿ, ಮಾ. 18: ಸ್ವಾಯತ್ತ ಕೊಡವ ಲ್ಯಾಂಡ್ (ಅಟೋನಮಿ) ಕೇಂದ್ರಾಡಳಿತ ಪ್ರದೇಶದ ಹಕ್ಕೊತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣ ದಿನವಾದ ಮಾ.21ರಂದು ಬೆಂಗಳೂರಿನ ಪುರಭವನದ ಎದುರು ಧರಣಿ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷÀ ಎನ್.ಯು.ನಾಚಪ್ಪ, ಸ್ವಾಯತ್ತ ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಘೋಷಣೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342 ರ ವಿಧಿಯಂತೆ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು ಮತ್ತು ಅತಿ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗವಾದ ಅಲ್ಪಸಂಖ್ಯಾತ ಸಾಂಸ್ಕøತಿಕ ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಲಿಸ್ಟ್(ಪಟ್ಟಿಯಲ್ಲಿ)ನಲ್ಲಿ ಸೇರಿಸಬೇಕೆಂಬ ಬೇಡಿಕೆ ಮುಂದಿಟ್ಟು ಧರಣಿ ನಡೆಯಲಿದೆ ಎಂದರು. ಕೊಡಗಿನ ವಿವಿಧೆಡೆಗಳಿಂದ ರಾಜಧಾನಿಗೆ ತೆರಳಲಿರುವ ಕೊಡವರು ಸಾಂಪ್ರದಾಯಿಕ ಉಡುಗೆ ತೊಡುಗೆ ಸಹಿತ ಅಂದು ಪೂರ್ವಾಹ್ನ 9.30ರಿಂದ ಮಧ್ಯಾಹ್ನ 12.30ರವರೆಗೆ ಸತ್ಯಾಗ್ರಹ ನಡೆಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಜ್ಞಾಪನಾ ಪತ್ರ ಸಲ್ಲಿಸಲಿದ್ದಾರೆ ಎಂದು ನಾಚಪ್ಪ ವಿವರಿಸಿದರು.

ಭೂಗತ ಪಾತಕಿಗಳು, ಖೋಟಾನೋಟು ಜಾಲದವರು, ರಿಯಲ್ ಎಸ್ಟೇಟ್ ಮಾಫಿಯಾಗಳು, ವೇಶ್ಯಾವಾಟಿಕೆ ಅಕ್ರಮಿಗಳು, ಟಿಂಬರ್ ಮಾಫಿಯಾಗಳು, ಭೂಗಳ್ಳರು, ಬಿಲ್ಡರ್‍ಗಳು, ಡೆವಲಪರ್‍ಗಳು, ಕಮಿಷನ್ ಏಜೆಂಟರು, ಡೀಲ್ ಮೇಕರ್‍ಗಳು, ಫಿಕ್ಸರ್‍ಗಳು, ನೆಗೋಷಿಯೇಟರ್‍ಗಳು, ಬೇನಾಮಿ ಆಸ್ತಿದಾರರು, ರಾಜಕೀಯ ದಲ್ಲಾಳಿಗಳು, ಹವಾಲ ದಂಧೆಕೋರರು ಕೊಡಗನ್ನು ಅಪವಿತ್ರಗೊಳಿಸುತ್ತಿರುವದಲ್ಲದೆ ಕೊಡವರ ನೆಲೆಗೆ ಸಂಚಕಾರ ತಂದೊಡ್ಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹಕ್ಕೊತ್ತಾಯಗಳು

ಸಂವಿಧಾನದ 2ಮತ್ತು 3 ನೇ ವಿಧಿ ಪ್ರಕಾರ ಇದೀಗ ಅಸ್ತಿತ್ವದಲ್ಲಿರುವ ಭಾರತದ 7 ಕೇಂದ್ರಾಡಳಿತ ಪ್ರದೇಶಗಳ ಮಾದರಿಯಲ್ಲಿ ಕೊಡಗನ್ನು ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು, 6ನೇ ಶೆಡ್ಯೂಲ್ ಪ್ರಕಾರ ಸ್ವಾಯತ್ತತೆ ರಚನೆಯಾಗಬೇಕು. ಕೊಡವ ಕ್ಷಾತ್ರ ಬುಡಕಟ್ಟು ಜನಾಂಗವನ್ನು ಸಂವಿಧಾನದ 340-342 ವಿಧಿಯಂತೆ ಶೆಡ್ಯೂಲ್ ಪಟ್ಟಿಗೆ ಸೇರಿಸಬೇಕು, ಎಂಬಿತ್ಯಾದಿ ಹಕ್ಕೊತ್ತಾಯವನ್ನು ಧರಣಿ ಸಂದರ್ಭ ಮಾಡಲಾಗುವದೆಂದು ನಾಚಪ್ಪ ತಿಳಿಸಿದರು.