ಮಡಿಕೇರಿ, ಮಾ. 18: ಮೊಣ್ಣಂಗೇರಿ ಗ್ರಾಮದ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಗ್ರಾಮದ ಮಹಿಳೆಯರನ್ನು ಒಗ್ಗೂಡಿಸಿಕೊಂಡು ತಮ್ಮ ಗುಂಪಿನ ವಾರ್ಷಿಕೋತ್ಸವದ ಜೊತೆಯಲ್ಲಿ ಗ್ರಾಮವನ್ನು ಸ್ವಚ್ಛಗೊಳಿಸಿ ಮಹಿಳಾ ದಿನಾಚರಣೆ ಹಾಗೂ ವಿಶೇಷವಾಗಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಸಹಾಯಕ ಶಿಶು ಅಭಿವೃದ್ಧಿಯೋಜನಾಧಿಕಾರಿ ಮೇಪಾಂಡಂಡ ಸವಿತ ಕೀರ್ತನ್ ಮಾತನಾಡಿ, ಇಲಾಖೆಯಿಂದ ದೊರಕುವ ತರಬೇತಿಗಳನ್ನು ಪಡೆದು ಪ್ರತಿಯೊಬ್ಬ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.

ಕೆ. ನಿಡುಗಣೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರೀಟಾ ಮುತ್ತಣ್ಣ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಮಕ್ಕಳಿಗೆ ಒಳ್ಳೆಯದು-ಕೆಟ್ಟದರ ಬಗ್ಗೆ ಬಾಲ್ಯದಲ್ಲಿ ಅರಿವು ಮೂಡಿಸಬೇಕು. ಗ್ರಾಮದ ಸ್ವಚ್ಛತೆಗೆ ಎಲ್ಲಾ ಕೈಜೋಡಿಸಬೇಕು. ಆರ್ಥಿಕ ಸದೃಢತೆಗೆ ಮಹಿಳೆಯರು ಮುಂದಾಗಬೇಕೆಂದು ತಿಳಿಸಿದರು.

ಗರ್ಭಿಣಿ ಸುಮ ರವಿ ಇವರಿಗೆ ಸೀರೆಯೊಂದಿಗೆ ಫಲ ನೀಡಿ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಪ್ರಾರ್ಥನೆ ನೇತ್ರ ರೈ, ಹರಿಣಿ ಸ್ವಾಗತಿಸಿ, ಸುಜಾತ ವಂದಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಜಾಜಿ, ಸದಸ್ಯರಾದ ಜಯಮ್ಮ ಕಿರಿಯ ಆರೋಗ್ಯ ಕಾರ್ಯಕರ್ತೆಯಾದ ಉಷಾ ಮತ್ತು ಜಯಂತಿ ಹಾಗೂ ರಾಧ ಉಪಸ್ಥಿತರಿದ್ದರು.