*ನಾಪೋಕ್ಲು, ಮಾ. 18: ದೇವಾಲಯಗಳ ಬಗ್ಗೆ ನಮಗೆ ತಾತ್ಸಾರ ಭಾವನೆ ಇದೆ. ಈ ಬಗ್ಗೆ ಕಿವಿಗೊಡದೆ ಹಿಂದೂ ದೇವಾಲಯಗಳಲ್ಲಿಯ ಪಾವಿತ್ರ್ಯತೆ ಹಾಗೂ ಧಾರ್ಮಿಕ ವಿಚಾರಗಳಿಗೆ ಧಕ್ಕೆ ಬಾರದಂತೆ ಪ್ರತಿಯೊಬ್ಬರೂ ಕಾಪಾಡಿಕೊಂಡು ಹೋಗಬೇಕಾಗಿದೆ. ಅಲ್ಲಿ ಧರ್ಮ ಕಾರ್ಯ ನಡೆಯುತ್ತಾ ಹೋದಾಗ ಸುಖ, ಶಾಂತಿ, ನೆಮ್ಮದಿ ಶಾಶ್ವತವಾಗಿ ಉಳಿಯುತ್ತದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತೊಡಿಕಾನ-ಭಾಗಮಂಡಲ, ತಲಕಾವೇರಿಯನ್ನು ಸಂಪರ್ಕಿಸುವ ತೊಡಿಕಾನ - ಪಟ್ಟಿ ರಸ್ತೆ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ: ಅರಂತೋಡು ರಾಜ್ಯ ಹೆದ್ದಾಯಿಂದ ತೊಡಿಕಾನ -ಪಟ್ಟಿ ಮೂಲಕ ದ.ಕ. ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಸಂಪರ್ಕಿಸುವ ಅತೀ ಕಡಿಮೆ ಅಂತರದ ರಸ್ತೆ. ಈ ರಸ್ತೆ ಅಭಿವೃದ್ಧಿಗಾಗಿ ಹಲವಾರು ವರ್ಷಗಳಿಂದ ಪ್ರಯತ್ನ ಪಡಲಾಗುತ್ತಿದ್ದು, ಸರಕಾರದಿಂದ ಈಗಾಗಲೇ ಅನುಮತಿ ದೊರೆತಿದೆ. ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದರು.

ಬೆಂಗಳೂರು ಚೆನ್ನೇನಹಳ್ಳಿಯ ಜನಸೇವಾ ಕೇಂದ್ರದ ವಿಶ್ವಸ್ಥ ನಿರ್ಮಲ್‍ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ, ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಅಟ್ಟುತ್ತಿರುವ ಪವೃತ್ತಿ ಖೇದಕರ. ಹೆತ್ತವರ ಸ್ವರಕ್ಷಣೆಯೊಂದಿಗೆ ಮಾತೃಭೂಮಿ, ಸಂಸ್ಕøತಿ, ಮಾತೃಧರ್ಮ ರಕ್ಷಣೆಯ ಅಗತ್ಯ ಇದೆ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್ ಮಾತನಾಡಿ, ಕೇವಲ ಮುಜರಾಯಿ ಇಲಾಖೆಯಿಂದ ಮಾತ್ರ ದೇವಳದ ಅಭಿವೃದ್ಧಿ ಅಸಾಧ್ಯ. ಭಕ್ತಾದಿಗಳ ಸಹಕಾರ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ದೇವಾಲಯಗಳಲ್ಲಿ ಇರುವ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಪೆರಾಜೆ ಶ್ರೀ ಶಾಸ್ತಾವೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಪೆರಾಜೆ ಶ್ರೀ ಶಾಸ್ತಾವೇಶ್ವರ ದೇವಾಲಯ ಮತ್ತು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಗಳಿಗೆ ಅವಿನಾಭಾವ ಸಂಬಂಧವಿದೆ ಎಂದು ನೆನಪಿಸಿದರು. ದೇವಾಲಯ ಸಮಿತಿ ಪ್ರಮುಖರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ಗ್ರಾಮದ ಮುಖಂಡರು ಹಾಜರಿದ್ದರು.