ಕುಶಾಲನಗರ, ಮಾ. 18: ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ, ಕಾವೇರಿ ತಾಲೂಕು ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಕುಶಾಲನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಕಾರು ನಿಲ್ದಾಣದ ಆವರಣದಲ್ಲಿ ಕುಶಾಲನಗರ ಪಟ್ಟಣದ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ, ಕಾವೇರಿ ತಾಲೂಕು ಹೋರಾಟ ಸಮಿತಿ ಪದಾಧಿಕಾರಿಗಳು, ಕರ್ನಾಟಕ ಕಾವಲುಪಡೆ, ನಗರ ಬಿಜೆಪಿ ಘಟಕ, ದಲಿತ ಹಿತರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಧರಣಿ ನಡೆಸಿದರು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಎಂ.ಎಂ.ಚರಣ್, ಕಾವೇರಿ ತಾಲೂಕು ಹೋರಾಟ ಸಮಿತಿ ಸಂಚಾಲಕ ವಿ.ಪಿ.ಶಶಿಧರ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಬಿಜೆಪಿ ಕುಶಾಲನಗರವನ್ನು ಕಾವೇರಿ ತಾಲೂಕಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಭರವಸೆ ನೀಡಿದರು.
ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಅವರು, ತಾನು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು 9 ತಿಂಗಳು ಕಳೆದಿವೆ. ಇದುವರೆಗೆ ಈ ಸಮಸ್ಯೆ ಬಗ್ಗೆ ಯಾರೊಬ್ಬರೂ ಕೂಡ ತನ್ನ ಗಮನಕ್ಕೆ ತಂದಿಲ್ಲ. ಇದೀಗ ಘೋಷಣೆಯಾಗಿರುವ 49 ನೂತನ ತಾಲೂಕುಗಳ ಪಟ್ಟಿಯಲ್ಲಿ ಕುಶಾಲನಗರವನ್ನು ಸೇರ್ಪಡೆಗೊಳಿಸುವಲ್ಲಿ ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಕುಶಾಲನಗರ ಪ್ರತ್ಯೇಕ ತಾಲೂಕಾಗಿ ರೂಪುಗೊಳ್ಳುವಲ್ಲಿ ಎಲ್ಲಾ ರೀತಿಯ ಅರ್ಹತೆಗಳನ್ನು ಒಳಗೊಂಡಿದೆ. ಬಿಜೆಪಿ ಸರಕಾರವಿದ್ದ ಸಂದರ್ಭ 43 ತಾಲೂಕುಗಳ ಘೋಷಣೆಯಾಗಿತ್ತು. ಈಗಿನ ಕಾಂಗ್ರೆಸ್ ಸರಕಾರ ನೂತನವಾಗಿ 6 ತಾಲೂಕುಗಳನ್ನು ಸೇರ್ಪಡೆಗೊಳಿಸಿದೆ. ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸುವಂತೆ ಮುಖ್ಯಮಂತ್ರಿಗಳು, ಕಂದಾಯ ಸಚಿವರೊಂದಿಗೆ ಚರ್ಚಿಸಲಾಗುವದು ಎಂದು ತಿಳಿಸಿದರು. ಈ ಸಂದರ್ಭ ಕಾವೇರಿ ತಾಲೂಕು ರಚನೆಗೆ ಸಂಬಂಧಿಸಿದ ಸಮಗ್ರ ಮಾಹಿತಿಗಳನ್ನು ಒಳಗೊಂಡ ಪ್ರತಿಗಳನ್ನು ಸಚಿವರಿಗೆ ಹಾಗೂ ಶಾಸಕರಿಗೆ ಸಲ್ಲಿಸಲಾಯಿತು.