ಶನಿವಾರಸಂತೆ, ಮಾ. 18: ಮಕ್ಕಳನ್ನು ಪ್ರೀತಿಸುವಂತೆಯೇ ಮರ-ಗಿಡಗಳನ್ನು ಪ್ರೀತಿಯಿಂದ ಬೆಳೆಸಿ, ಪೋಷಿಸಬೇಕು ಎಂದು ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್ ಅಭಿಪ್ರಾಯಪಟ್ಟರು.
ಸಮೀಪದ ಹಂಡ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ‘ಪರಿಸರ ಸ್ನೇಹಿ’ ಸಂಘ ಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಮಧುಕುಮಾರ್ ಮಾತನಾಡಿ, ರಾಜ್ಯದಲ್ಲಿ 2 ಸಾವಿರ ಸರ್ಕಾರಿ ಶಾಲೆಗಳಲ್ಲಿ ಪರಿಸರ ಸ್ನೇಹಿ ಸಂಘ ಸ್ಥಾಪನೆಯಾಗಿದೆ. ಸರ್ಕಾರ ಆರ್ಥಿಕ ಸಹಾಯ ನೀಡುತ್ತದೆ. ಮಗುವಿಗೊಂದು ಗಿಡ ನೆಡುವ ಮೂಲಕ ಪರಿಸರದ ಜ್ಞಾನ ಮೂಡಿಸಬೇಕು ಎಂದರು.
ಪರಿಸರ ಸ್ನೇಹಿ ಸಂಘದ ಮೇಲ್ವಿಚಾರಕಿ ಶಿಕ್ಷಕಿ ಆರ್.ಕೆ. ರಾಧಾ ಪ್ರ್ರಾಸ್ತಾವಿಕ ನುಡಿಯಾಡಿ, ಪರಿಸರ ಸ್ನೇಹಿ ಸಂಘ ಸ್ಥಾಪನೆ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಪ್ರೀತಿ ಮೂಡಿಸಲಾಗುವದು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಟ್ಟಯ್ಯ ಮಾತನಾಡಿ, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಹೂ, ಹಣ್ಣು, ತರಕಾರಿ ಗಿಡಗಳನ್ನು ನೆಡಿಸುವ ಮೂಲಕ ಅವುಗಳ ಪೋಷಣೆಯ ಅರಿವು ಮೂಡಿಸಬೇಕು ಎಂದರು.
ಸಮಿತಿ ಸದಸ್ಯ ನಾಗೇಶ್, ಮುಖ್ಯ ಶಿಕ್ಷಕಿ ಹೆಚ್.ಕೆ. ಸುಶೀಲಾ, ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಎಂ. ಸುನಂದಾ, ಸಹ ಶಿಕ್ಷಕರಾದ ನಾಗರಾಜ್, ಪಾರಿ ಮಂಜುಳ ಉಪಸ್ಥಿತರಿದ್ದರು.