ಸೋಮವಾರಪೇಟೆ, ಮಾ. 18: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಶನಿವಾರಸಂತೆ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಭರವಸೆ ನೀಡಿದರು.

ಕೊಡ್ಲಿಪೇಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸ್ಥಳೀಯರ ಅಹವಾಲು ಆಲಿಸಿ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಶನಿವಾರಸಂತೆ ಗ್ರಾ.ಪಂ.ನ್ನು ಮೇಲ್ದರ್ಜೆಗೇರಿಸಬೇಕಿದೆ ಎಂದರು.

ಕಳೆದ 2006ರಲ್ಲಿಯೇ ಈ ಬಗೆಗಿನ ಪ್ರಕ್ರಿಯೆಗಳು ಕಾರ್ಯರೂಪಕ್ಕೆ ಬಂದಿದ್ದು, ಪ್ರಥಮ ಹಂತವಾಗಿ 420 ಎಕರೆ ಪ್ರದೇಶವನ್ನು ಗುರುತಿಸಿ ಸರ್ವೆ ಕಾರ್ಯ ಮಾಡಲಾಗಿದೆ. ಇದರಲ್ಲಿ 220 ಏಕರೆ ಪ್ರದೇಶಕ್ಕೆ ಪ್ರಾಪರ್ಟಿ ಕಾರ್ಡ್ ಬಂದಿದ್ದು, ಉಳಿದ 200 ಎಕರೆ ಪ್ರದೇಶಕ್ಕೆ ಪ್ರಾಪರ್ಟಿ ಕಾರ್ಡ್ ಬಂದಿಲ್ಲ. ಇದರೊಂದಿಗೆ ಸರ್ವೆಯರ್ ಹುದ್ದೆಯೂ ಖಾಲಿಯಿದ್ದು, ಇದರಿಂದಾಗಿ ಈ ಸಂಬಂಧಿತ ಪ್ರಕ್ರಿಯೆ ನಿಂತನೀರಾಗಿದೆ ಎಂದು ಸ್ಥಳೀಯರು ಸಚಿವರ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವರು, ತಕ್ಷಣ ಸರ್ಕಾರದ ಗಮನ ಸೆಳೆದು ಖಾಯಂ ಸರ್ವೆಯರ್‍ನ್ನು ನೇಮಿಸಲಾಗುವದು. ನಂತರ ಪ್ರಾಪರ್ಟಿ ಕಾರ್ಡ್ ವಿತರಿಸಿ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ಏಪ್ರಿಲ್ ಒಳಗೆ ನೂತನ ಸಾರಥಿ: ಕೊಡಗು ಜಿಲ್ಲಾ ಕಾಂಗ್ರೆಸ್‍ಗೆ ಕಳೆದ 15 ತಿಂಗಳುಗಳಿಂದ ಜಿಲ್ಲಾಧ್ಯಕ್ಷರನ್ನು ನೇಮಿಸದೇ ಪ್ರಬಾರ ಅಧ್ಯಕ್ಷರನ್ನೇ ಮುಂದುವರೆಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಏಪ್ರಿಲ್ ಒಳಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗುವದು ಎಂದರು.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದು, ಪಕ್ಷದ ಸಂಘಟನೆ, ಮುಂಬರುವ ವಿಧಾನ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸೂಕ್ತ ಅಭ್ಯರ್ಥಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗುವದು ಎಂದು ಸೀತಾರಾಂ ಸ್ಪಷ್ಟಪಡಿಸಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ, ನಾಪಂಡ ಮುತ್ತಪ್ಪ, ಶರತ್‍ಶೇಖರ್, ಕೆ.ಎ. ಯಾಕೂಬ್, ಮಹೇಶ್, ಔರಂಗಜೇಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಉಸ್ತುವಾರಿ ಸಚಿವ ಎಂ.ಆರ್.ಸೀತರಾಮ್ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ಆಡಳಿತ ಮಂಡಳಿ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.