ಶನಿವಾರಸಂತೆ, ಮಾ. 18: ಶನಿವಾರಸಂತೆ ಗ್ರಾಮ ಪಂಚಾಯಿತಿಯು ಬೇಜವಾಬ್ದಾರಿ ಯಿಂದ ಇಲ್ಲಿನ ಸರಕಾರಿ ಆಸ್ಪತ್ರೆ, ಶಾಲಾ - ಕಾಲೇಜುಗಳ ಹಾಗೂ ಹರಿಯುವ ಹೊಳೆಯ ಪಕ್ಕದಲ್ಲಿ ಕಸವನ್ನು ಸುರಿದು ಪರಿಸರ ಹಾಳು ಮಾಡಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಾರ್ವಜನಿಕರು ಮತ್ತು ಶಾಲಾ - ಕಾಲೇಜು ವಿದ್ಯಾರ್ಥಿಗಳು ಇಂದು ಗುಡುಗಳಲೆ ವೃತ್ತದಿಂದ ಜಾಥಾ ನಡೆಸಿ ಕಂದಾಯ ಇಲಾಖೆ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಸ್ವಚ್ಛ ಭಾರತದ ಕನಸು ಕಾಣುತ್ತಿರುವ ಭಾರತೀಯರಿಗೆ ತದ್ವಿರುದ್ಧವಾಗಿ ಗ್ರಾಮ ಪಂಚಾಯಿತಿ ಪಟ್ಟಣದ ಕಸ ಸುರಿದು ನಾಯಿ- ಹಂದಿ, ದನಗಳು, ಕಾಗೆಗಗಳು ಅದನ್ನೇ ಎಳೆದಾಡಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಹೆರಿಗೆಗೆ ಬರುವ ಗರ್ಭಿಣಿ ಮಹಿಳೆಯರು ಮತ್ತು ನವಜಾತ ಶಿಶುಗಳಿಗೆ ಈ ಕಸದ ದುರ್ವಾಸನೆಯಿಂದ ಆರೋಗ್ಯದ ಸಮಸ್ಯೆ ಎದುರಾಗುತ್ತಿದೆ.
ಸ್ಥಳಕ್ಕೆ ಆಗಮಿಸಿದ ತಾಲೂಕು ತಹಶೀಲ್ದಾರ್ ಕೃಷ್ಣಪ್ಪ ಅವರನ್ನು ಪ್ರತಿಭಟನಾಕಾರರು ಸುತ್ತುವರಿದು ಧಿಕ್ಕಾರ ಹಾಕಿದರು. ತಹಶೀಲ್ದಾರರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ದುಂಡಳ್ಳಿ ಪಂಚಾಯಿತಿಗೆ ಸೇರಿದ ಪೈಸಾರಿ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಸ್ಥಳ ಗುರುತಿಸಲಾಗಿದೆ. ಇಂದು ಸಂಜೆಯ ಒಳಗೆ ಅಧಿಸೂಚನೆ ಬರುತ್ತದೆ ಎಂದು ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು ಅಧಿಸೂಚನೆ ಬಂದ ಮೇಲೆ ಹೋರಾಟ ಕೈಬಿಡಲಾಗುವದು ಎಂದು ಉತ್ತರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಗದೀಶ್, ತಾಲೂಕು ಯುವ ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಪದಾಧಿಕಾರಿಗಳಾದ ನಾಗಾರಾಜ್, ಆನಂದ್, ರಮೇಶ್, ರಾಜಣ್ಣ, ಹರೀಶ್, ಪ್ರವೀಣ್, ಲೂಯಿಸ್, ನಾಗೇಶ್ ಪೂಜಾರಿ, ಗಂಗಮ್ಮ, ಗೌರಮ್ಮ, ಜಯಂತಿ, ಶೀಲ, ರಾಣಿ, ರಂಗಸ್ವಾಮಿ ಹಾಗೂ ಇತರರು ಪಾಲ್ಗೊಂಡಿದ್ದರು.