ಸೋಮವಾರಪೇಟೆ, ಮಾ.18: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದ್ದು, ಈಗಿರುವ ಪಟ್ಟಣ ಪಂಚಾಯಿತಿ ಮಾನ್ಯತೆಯೂ ಕಳೆದುಕೊಳ್ಳುವ ಮುನ್ನ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಪ.ಪಂ. ಸಾಮಾನ್ಯ ಸಭೆಯಲ್ಲಿ ವಿಸ್ತøತ ಚರ್ಚೆ ನಡೆಯಿತು.

ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಯನ್ನು ಶಾಸಕರೊಡಗೂಡಿ ನಿಯೋಗ ತೆರಳಿ ಗಮನಸೆಳೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸದಸ್ಯರುಗಳು ಗಂಭೀರ ಚರ್ಚೆ ನಡೆಸಿದರು.

ಪ.ಪಂ. ವ್ಯಾಪ್ತಿಯಲ್ಲಿ ಕೇವಲ 6 ಸಾವಿರ ಜನಸಂಖ್ಯೆಯಿದ್ದು, ಮುಂದೆ ಗ್ರಾ.ಪಂ. ಮಾನ್ಯತೆಗೆ ಒಳಪಡುವ ಮುನ್ನ ಪಂಚಾಯಿತಿ ವ್ಯಾಪ್ತಿಯ ಚೌಡ್ಲು, ಹಾನಗಲ್ಲು, ಬೇಳೂರು ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳನ್ನು ಪ.ಪಂ.ನೊಂದಿಗೆ ಸೇರಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸಭೆಯ ಗಮನಸೆಳೆದರು.

ಈ ಬಗ್ಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ನೇತೃತ್ವದಲ್ಲಿ ಪ.ಪಂ. ಸದಸ್ಯರು ಹಾಗೂ ಈ ಭಾಗದ ಇತರ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ, ಅವರ ಗಮನ ಸೆಳೆಯುವಂತೆ ಸಭೆ ತೀರ್ಮಾನಿಸಿತು.

ಪಂಚಾಯಿತಿಯನ್ನು ಕಳೆದ ಹಲವು ದಶಕಗಳಿಂದ ಕಾಡುತ್ತಿರುವ ಕಸವಿಲೇವಾರಿ ಸಮಸ್ಯೆಗೆ ದಿಟ್ಟ ಕ್ರಮ ಕೈಗೊಳ್ಳಲೇಬೇಕಾಗಿದೆ. ಪ.ಪಂ. ಸದಸ್ಯರ ನಿಯೋಗ ಮದ್ದೂರಿಗೆ ತೆರಳಿ ಅಲ್ಲಿ ಅಳವಡಿಸಿರುವ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ವೀಕ್ಷಿಸಿದ್ದು, ಅದರಂತೆ ಪಂಚಾಯಿತಿ ವ್ಯಾಪ್ತಿಯಲ್ಲೇ ಘಟಕ ನಿರ್ಮಿಸಲು ಕ್ರಮಕೈಗೊಳ್ಳುತ್ತಿದ್ದೇವೆ. ಘನತ್ಯಾಜ್ಯ ನಿರ್ವಹಣೆಗಾಗಿ ಕಳೆದ 2013-14ರಲ್ಲಿ ಬಿಡುಗಡೆಯಾಗಿರುವ ರೂ. 10 ಲಕ್ಷ ಅನುದಾನದಲ್ಲಿ ಕಸವಿಂಗಡಣೆ, ವೈಜ್ಞಾನಿಕ ವಿಲೇವಾರಿ ಘಟಕ ಖರೀದಿಸಲು ಸಭೆಯ ಅನುಮತಿ ಬೇಕೆಂದು ಅಧ್ಯಕ್ಷರು ಮನವಿ ಮಾಡಿದರು.

ಈ ಬಗ್ಗೆ ಎಲ್ಲಾ ಸದಸ್ಯರು ಬೆಂಬಲ ನೀಡಿದರು. ಕಸವಿಲೇವಾರಿ ಘಟಕ ಸ್ಥಾಪಿಸಲು ಒಟ್ಟಾರೆ 30 ಲಕ್ಷದಷ್ಟು ಹಣ ಬೇಕಿದ್ದು, ಕ್ರಿಯಾಯೋಜನೆ ತಯಾರಿಸುವಂತೆ ಅಭಿಯಂತರ ವೀರೇಂದ್ರ ಅವರಿಗೆ ಸಭೆ ಸೂಚಿಸಿತು.

2017-18ನೇ ಸಾಲಿಗೆ ಎಸ್‍ಎಫ್‍ಸಿ ಯೋಜನೆಯಡಿ 50ಲಕ್ಷ ಹಾಗೂ 14ನೇ ಹಣಕಾಸು ಯೋಜನೆಯಡಿ 45.86 ಲಕ್ಷ ಅನುದಾನ ಬಂದಿದ್ದು, ಸರ್ಕಾರದ ನಿರ್ದೇಶನದಂತೆ ವಿವಿಧ ಕಾಮಗಾರಿಗಳಿಗೆ ಬಳಸಬೇಕಿದೆ. ವಾರ್ಡ್‍ಗಳಲ್ಲಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಕೇವಲ 19.58 ಲಕ್ಷ ಮಾತ್ರ ಉಳಿಯಲಿದ್ದು, ಪಂಚಾಯಿತಿ ಅನುದಾನವನ್ನು ಸೇರಿಸಿ 11 ವಾರ್ಡ್‍ಗಳಿಗೆ ತಲಾ 2ಲಕ್ಷದಂತೆ ಅನುದಾನ ಹಂಚಿಕೆ ಮಾಡಲಾಗುವದು ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಸಭೆಯಲ್ಲಿ ತಿಳಿಸಿದರು.

ವಾರ್ಡ್ 6ರ ಕಕ್ಕೆಹೊಳೆ ಸಮೀಪ ಪಂಚಾಯಿತಿಯ ಯಾವದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇದನ್ನು ಸ್ಥಗಿತಗೊಳಿಸುವಂತೆ ಹಿಂದಿನ ಸಭೆಯಲ್ಲೇ ತಿಳಿಸಿದ್ದರೂ ಸಹ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರುಗಳಾದ ಕೆ.ಎ.ಆದಂ, ಶೀಲಾ ಡಿಸೋಜ, ಇಂದ್ರೇಶ್ ಸೇರಿದಂತೆ ಬಹುತೇಕ ಸದಸ್ಯರು ಪ.ಪಂ. ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅನಧಿಕೃತ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳದೇ ಸಭೆ ನಡೆಸಬಾರದು ಎಂದು ಪಟ್ಟುಹಿಡಿದರು. ಇದಕ್ಕೆ ಅಧ್ಯಕ್ಷೆ ಸೇರಿದಂತೆ ಇತರ ಸದಸ್ಯರೂ ಒಮ್ಮತ ವ್ಯಕ್ತಪಡಿಸಿದರು.

ಸಭೆಯ ಮಧ್ಯದಲ್ಲಿಯೇ ಮುಖ್ಯಾಧಿಕಾರಿ, ಅಭಿಯಂತರ ಸೇರಿದಂತೆ ಇತರ ಅಧಿಕಾರಿಗಳನ್ನು ಕಟ್ಟಡ ನಿರ್ಮಾಣ ಸ್ಥಳಕ್ಕೆ ಕಳುಹಿಸಲಾಯಿತು. ಅಧಿಕಾರಿಗಳು ಪರಿಕರಗಳನ್ನು ವಶಕ್ಕೆ ಪಡೆದು ಕಾಮಗಾರಿಯನ್ನು ಸ್ಥಗಿತಗೊಳಿಸಿದ ನಂತರ ಸಭೆ ಮುಂದುವರೆಯಿತು.

ಸ್ವಚ್ಛ ಭಾರತ್ ಅಭಿಯಾನದ ವಸ್ತುನಿಷ್ಠ ವರದಿಗೆ ಸರ್ಕಾರದಿಂದಲೇ ಖಾಸಗಿ ಸಂಸ್ಥೆಯ ಮೂಲಕ ಸರ್ವೆ ಕಾರ್ಯ ನಡೆಸಲಾಗುವದು. ಪಂಚಾಯಿತಿ ವ್ಯಾಪ್ತಿಯ ಪ್ರತಿ ಮನೆಗಳ ಸರ್ವೆ ನಡೆಸಲಾಗುವದು. ಈ ಹಿನ್ನೆಲೆ ಸರ್ಕಾರೇತರ ಸಂಸ್ಥೆಗೆ ಪ್ರತಿ ಮನೆಯ ಸರ್ವೆಗೆ 20 ರೂಪಾಯಿಗಳಂತೆ ಪಂಚಾಯಿತಿ ಹಣ ನೀಡಬೇಕಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ಸಭೆಯ ಗಮನಕ್ಕೆ ತಂದರು.

ಪಂಚಾಯಿತಿಯ ಮಳಿಗೆಯನ್ನು 12 ಸಾವಿರ ಮಾಸಿಕ ಬಾಡಿಗೆಗೆ ಪಡೆದ ವ್ಯಕ್ತಿಯೋರ್ವರು ಒಂದು ವರ್ಷದಿಂದಲೂ ಬಾಡಿಗೆ ಪಾವತಿಸದೇ ಇದೀಗ ಕಟ್ಟಡದ ಬಗ್ಗೆ ಅಪಸ್ವರ ಎತ್ತಿರುವದು ಸರಿಯಲ್ಲ. ಟೆಂಡರ್‍ನಲ್ಲಿ ಪಡೆದ ಮಳಿಗೆಗೆ ಬಾಡಿಗೆ ಪಾವತಿಸಲೇಬೇಕು. ಈ ಬಗ್ಗೆ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಇಂದ್ರೇಶ್ ಒತ್ತಾಯಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ರಮೇಶ್ ಶೆಟ್ಟಿ, ಸದಸ್ಯರುಗಳಾದ ಬಿ.ಎಂ. ಸುರೇಶ್, ಲೀಲಾ ನಿರ್ವಾಣಿ, ಶೀಲಾ ಡಿಸೋಜ, ಈಶ್ವರ್, ನಾಗರಾಜು, ಸುಶೀಲಾ, ಸುಷ್ಮಾ, ಮೀನಾಕುಮಾರಿ, ಉದಯಶಂಕರ್, ಅಭಿಯಂತರ ವೀರೇಂದ್ರ, ಸುಜಿತ್, ಪಂಚಾಯಿತಿ ಸಿಬ್ಬಂದಿಗಳಾದ ರಫೀಕ್, ಡಿಸೋಜ, ಭಾವನಾ, ರೂಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು.