ಶ್ರೀಮಂಗಲ, ಮಾ. 19: ಬಾಳೆಲೆ ಸಮೀಪ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಮಲ್ಲೂರು ಗ್ರಾಮದಲ್ಲಿ ಹುಲಿ ಧಾಳಿಗೆ ಹಸುವೊಂದು ಬಲಿಯಾಗಿದೆ. ಗ್ರಾಮದ ರೈತ ವನಂದಾ ಪೂಣಚ್ಚ ಅವರ ಮನೆಯ ಸಮೀಪ ಕಟ್ಟಿದ್ದ ಹಾಲು ಕರೆಯುವ ಮಿಶ್ರತಳಿ ಹಸುವಿನ ಮೇಲೆ ಹುಲಿ ಧಾಳಿ ನಡೆಸಿದ್ದು, ಹಸುವನ್ನು ಕೊಂದು ಕೆಲಭಾಗವನ್ನು ಭಕ್ಷಿಸಿದೆ.

ಹುಲಿ ಧಾಳಿಯ ಸದ್ದು ಕೇಳಿ ರೈತ ಪೂಣಚ್ಚ ಅವರು ಟಾರ್ಜ್ ಬೆಳಕು ಬಿಟ್ಟು ಕಿರುಚಿದಾಗ ಹುಲಿ ಕಾಲ್ಕಿತ್ತಿದೆ. ಹಸು ಕಳೆದುಕೊಂಡ ರೈತ ಪೂಣಚ್ಚ ಅವರು ಸೂಕ್ತ ಪರಿಹಾರ ಒದಗಿಸುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮದ ಜನ ವಸತಿ ಪ್ರದೇಶದಲ್ಲಿ ಹುಲಿ ಧಾಳಿ ಮರುಕಳಿಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಕಲ್ಲಳ್ಳ ವಿಭಾಗದ ವಲಯ ಅರಣ್ಯಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಾಜರು ನಡೆಸಿದ್ದರು. ಇವರೊಂದಿಗೆ ಉಪ ವಲಯ ಅರಣ್ಯಾಧಿಕಾರಿ ಅಪ್ಪಸಾಹೇಬ್, ಅರಣ್ಯ ರಕ್ಷಕ ಕಜಾ ಅತ್ತರ್, ಅರಣ್ಯ ರಕ್ಷಕ ಕೆ.ಪಿ. ರವಿಕುಮಾರ್ ಅವರುಗಳು ತೆರಳಿ ಹುಲಿ ಹೆಜ್ಜೆ ಗುರುತು ಜಾಡು ಹಿಡಿದು ಕಾರ್ಯಾಚರಣೆ ಕೈಗೊಂಡಿದ್ದಾರೆ.