ಗೋಣಿಕೊಪ್ಪಲು, ಮಾ. 19 : ದಕ್ಷಿಣ ಕೊಡಗಿನ ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ಎಪ್ರಿಲ್ 24 ರಿಂದ ಅಳಮೇಂಗಡ ಕ್ರಿಕೆಟ್ ನಮ್ಮೆ ನಡೆಯಲಿದ್ದು 24 ದಿನಗಳ ಕಾಲ ನಡೆಯಲಿದೆ ಎಂದು ಅಳಮೇಂಗಡ ಕ್ರಿಕೆಟ್ ಹಬ್ಬ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಮೈದಾನ ಸಿದ್ದತೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂದರ್ಭ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡ ಸಮಿತಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಕ್ರೀಡಾಭಿಮಾನಿಗಳಿಗೆ ಬೇಸಿಗೆ ರಜೆ ದಿನಗಳನ್ನು ವ್ಯರ್ಥವಾಗದಂತೆ ಕ್ರಿಕೆಟ್ ನಮ್ಮೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಬಲ್ಲಿಮಾಡ, ಕಾಂಡೇರ, ಅಡ್ಡೇಂಗಡ ಹಾಗೂ ಕೊಕ್ಕೇಂಗಡ ಕ್ರಿಕೆಟ್ ಹಬ್ಬ ಇದೇ ಮೈದಾನದಲ್ಲಿ ಯಶಸ್ವಿಯಾಗಿ ನಡೆದಿದ್ದು, ಸ್ಥಳೀಯರ ಸಹಕಾರದಲ್ಲಿ ಉತ್ತಮವಾಗಿ ನಡೆಸಲು ಸಿದ್ದತೆ ಆರಂಭಗೊಂಡಿದೆ. 8 ಓವರ್ಗಳ ಪಂದ್ಯ ಆಯೋಜಿಸುವ ಮೂಲಕ ಪ್ರತಿ ತಂಡಕ್ಕೂ ಉತ್ತಮ ಅಟ ಪ್ರದರ್ಶಿಸಲು ಅವಕಾಶ ನೀಡಲಾಗುವದು. ಸುಮಾರು 20 ಲಕ್ಷ ಹಣದಲ್ಲಿ ಪಂದ್ಯಾಟ ಆಯೋಜಿಸುತ್ತಿದ್ದೇವೆ ಎಂದರು.ಈಗಾಗಲೇ ರಾಜ್ಯ ಸರ್ಕಾರ ರೂ. 5 ಲಕ್ಷ ಅನುದಾನ ಘೊಷಣೆ ಮಾಡಿದೆ. ಇದರಂತೆ ಸಂಸದರಿಂದಲೂ ಅನುದಾನ ನಿರೀಕ್ಷೆ ಮಾಡುತ್ತಿದ್ದೇವೆ. ಹಾಕಿ ಹಬ್ಬಕ್ಕೆ ನೀಡುವ ಇಂತಹ ಹಣವನ್ನು ಮೈದಾನದ ಸುತ್ತಲು ತಡೆಗೋಡೆ ನಿರ್ಮಾಣ ಮಾಡುವ ಉದ್ದೇಶದಿಂದ ಅಳಮೇಂಗಡ ಕ್ರಿಕೆಟ್ ಹಬ್ಬ ರೂಪಿಸುತ್ತಿದ್ದೇವೆ ಎಂದರು.
ಕುಟುಂಬ ಅಧ್ಯಕ್ಷ ಅಳಮೇಂಗಡ ವಿವೇಕ್ ಮಾತನಾಡಿ, ಕುಟುಂಬದ ಸದಸ್ಯರು ಹಬ್ಬದ ಯಶಸ್ಸಿಗೆ ಶ್ರಮಿಸುತ್ತಿದ್ದು, ಸ್ಥಳಿಯರ ಸಹಕಾರ ಕೂಡ ಇದೆ ಎಂದರು.
ಕಾರ್ಯದರ್ಶಿ ಅಳಮೇಂಗಡ ಮೋಹನ್ ಚೆಂಗಪ್ಪ ಮಾತನಾಡಿ, 2 ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ. ಮುಂದೂಡಲ್ಪಟ್ಟ ಪಂದ್ಯಗಳನ್ನು ಎರಡನೆ ಮೈದಾನದಲ್ಲಿ ನಡೆಸಲಾಗುವುದು. ಅಲ್ಲದೆ ದೂರದಿಂದ ಬಂದ ತಂಡಗಳಿಗೆ ಮುಂದೂಡಲ್ಪಟ್ಟ ಪಂದ್ಯದೊಂದಿಗೆ ಮತ್ತೊಂದು ಸುತ್ತಿನ ಪಂದ್ಯಗಳನ್ನು ಅದೇ ದಿನ ನಡೆಸುವ ಮೂಲಕ ಆಟಕ್ಕೆ ಪ್ರೋತ್ಸಾಹ ನೀಡಲಾಗುವದು ಎಂದರು.
ಈಗಾಗಲೇ ತಂಡಗಳ ನೋಂದಣಿಗೆ ಜಿಲ್ಲೆಯ 23 ಕಡೆಗಳಲ್ಲಿ ಅವಕಾಶ ಮಾಡಲಾಗಿದೆ. ಸುಮಾರು 250 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭಾಗವಹಿಸುವ ತಂಡಗಳಲ್ಲಿ ಗೊಂದಲ ಉಂಟಾಗದಂತೆ ಪಂದ್ಯಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ಈ ಸಂದರ್ಭ ಕುಟುಂಬದ ಸದಸ್ಯರುಗಳು ಮೈದಾನ ಸಿದ್ದತೆಯಲ್ಲಿ ತೊಡಗಿಕೊಂಡರು. ಯಂತ್ರಗಳ ಮೂಲಕ ಮೈದಾನದ ಸಮತಟ್ಟು ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಉಪಾಧ್ಯಕ್ಷರುಗಳಾದ ಸುರೇಶ್ ಸುಬ್ಬಯ್ಯ, ನಿಧಿರಾ ಸೋಮಯ್ಯ, ಸುರೇಶ್ ಗಣಪತಿ, ಸಲಹೆಗಾರ ಅಳಮೇಂಗಡ ವಿಠಲ ಉಪಸ್ಥಿತರಿದ್ದರು.
-ಕಿಶೋರ್ ನಾಚಪ್ಪ