ಮಡಿಕೇರಿ, ಮಾ. 19: ಹೌದು, ಈಕೆ ಮಡಿಕೇರಿ ಸಂತ ಜೋಸೆಫರ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ತಂಡದ ಕೆಡೆಟ್; 2017ನೇ ಸಾಲಿನ ಜ. 26 ರಂದು ನವದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ -ಗೋವಾ ರಾಜ್ಯಗಳನ್ನು ಒಳಗೊಂಡ ಎನ್‍ಸಿಸಿ ಒಕ್ಕೂಟದ ಪ್ರತಿನಿಧಿಯಾಗಿದ್ದ ಅಜ್ಜಿನಂಡ ಐಶ್ವರ್ಯ ದೇಚಮ್ಮ ಈ ಅದ್ವಿತೀಯ ಸಾಧಕಿ.
ಈಕೆ ಸಮಗ್ರ ಭಾರತದ ಮಹಿಳಾ ಎನ್‍ಸಿಸಿ ಒಕ್ಕೂಟವನ್ನು ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಮುನ್ನಡೆಸಿದ ‘ಕಮಾಂಡೆಂಟ್’... ಮೂರು ವರ್ಷಗಳ ಹಿಂದೆ ಎನ್‍ಸಿಸಿ ಕಿರಿಯರ ವಿಭಾಗ ದಿಂದ ಕರ್ನಾಟಕ ವನ್ನು ಪ್ರತಿನಿಧಿಸಿದ್ದ ಐಶ್ವರ್ಯ, ಈ ಸಾಲಿನ ಗಣರಾಜ್ಯೋತ್ಸವ ಸಮಾರಂಭದಲ್ಲಿ ತನ್ನ ನಿರೀಕ್ಷೆ ಮೀರಿ ಸಮಗ್ರ ಭಾರತದ ಮಹಿಳಾ ಕೆಡೆಟ್‍ಗಳನ್ನು ಮುಂಚೂಣಿಯಲ್ಲಿ ನಿಂತು ನಡೆಸುವ ಮೂಲಕ ಜಿಲ್ಲೆಗೂ ಗೌರವ ತಂದಿದ್ದಾಳೆ.
ಭಾರತದ ಗಣರಾಜ್ಯೋತ್ಸವ ಸಮಾರಂಭದ ಅತ್ಯಾಕರ್ಷಕ ಪಥ ಸಂಚಲನದಲ್ಲಿ ಅರ್ಹತೆ ಪಡೆಯಲು; ನಿರಂತರ ಎರಡು ತಿಂಗಳು ಹಗಲು - ಇರುಳೆನ್ನದೆ ಪರಿಶ್ರಮ ಪಡಬೇಕು. ನಾಲ್ಕು ಹಂತದ ತರಬೇತಿ ಬಳಿಕ ಕರ್ನಾಟಕ - ಗೋವಾ ತಂಡಗಳನ್ನು ಒಟ್ಟಾಗಿ ಮುನ್ನಡೆಸುವ ಅರ್ಹತೆ ಹೊಂದಬೇಕು.
ಈ ಹಂತದಲ್ಲಿ ನಿರಂತರ ಪರಿಶ್ರಮಗಳಿಸಿ; ಬೆಂಗಳೂರಿನಲ್ಲಿ ನಮ್ಮ ಭಾರತ ಸೇನೆಯ ಅಧಿಕಾರಿಗಳಿಂದ ಎಲ್ಲಾ ಹಂತದಲ್ಲಿ ಅರ್ಹತೆಯೊಂದಿಗೆ 3 ಶ್ರೇಣಿಯ ಸತತ ತರಬೇತಿಯನ್ನು ಕಠಿಣ ಹಾದಿಯಲ್ಲಿ ಪಡೆದುಕೊಳ್ಳಬೇಕು. ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಸೈನಿಕ ಶಿಬಿರದಲ್ಲಿ ಮುಂಜಾನೆ 5 ಗಂಟೆಯಿಂದ ಮಧ್ಯರಾತ್ರಿ ತನಕ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಪೂರ್ವ ತಯಾರಿ ನಡೆಯಲಿದ್ದು; ಅಲ್ಲಿ ತಿಂಗಳುಗಟ್ಟಲೆ ಶಾರೀರಿಕ, ಸಾಂಸ್ಕøತಿಕ ಹಾಗೂ ರಾಷ್ಟ್ರೀಯ ವಿಚಾರಧಾರೆಯ ಸಂಗತಿಗಳಲ್ಲಿ ಪರಿಣಿತಿ ಪಡೆಯಬೇಕು. ದಿನನಿತ್ಯ ಅಂದಾಜು 41/2 ಕೆ.ಜಿ. ತೂಕದ ರೈಫಲ್ ಸಹಿತ ಆರೆಂಟು ಕಿ.ಮೀ. ದೂರ ಪಥಸಂಚಲನದೊಂದಿಗೆ ತಮ್ಮ ಸಾಮಥ್ರ್ಯ ತೋರಬೇಕು.
ಈ ರೀತಿ ಎಲ್ಲದರಲ್ಲಿ ಜಯಿಸಿದವರಿಗೆ ಸೇನಾ ನೆಲೆಯಿಂದಲೇ ಸಮವಸ್ತ್ರ ಸಹಿತ ಅಗತ್ಯ ವಸ್ತುಗಳ ಕಿಟ್ (ಬ್ಯಾಗ್) ನೀಡಿ; ದೇಶದ ರಾಜಧಾನಿ ನವದೆಹಲಿಯ ಸೇನಾ ಶಿಬಿರಕ್ಕೆ ಕಳುಹಿಸಿ ಕೊಡಲಾಗುತ್ತದೆ. ಅಲ್ಲಿ ಸರಿ ಸುಮಾರು 25 ದಿನಗಳ ಕಾಲ ಇನ್ನಷ್ಟು ಕಠಿಣ ರೀತಿ ತರಬೇತು ನೀಡಲಾಗುತ್ತದೆ.
ಮಾತ್ರವಲ್ಲದೆ ಸಮಗ್ರ ಭಾರತದ 17 ತಂಡಗಳನ್ನು ಒಗ್ಗೂಡಿಸಿ; 2000ಕ್ಕೂ ಅಧಿಕ ಮಂದಿ ಎನ್‍ಸಿಸಿ ಕೆಡೆಟ್‍ಗಳು ಸಾಮೂಹಿಕ ಕಸರತ್ತು ನಡೆಸುತ್ತಾರೆ. ಇಲ್ಲಿ ಉನ್ನತ ಸೈನ್ಯಾಧಿಕಾರಿಗಳನ್ನು ಒಳಗೊಂಡ ತರಬೇತುದಾರರು; ಈ ಎರಡು ಸಾವಿರ ಮಂದಿಯಲ್ಲಿ ತಲಾ 148 ಹುಡುಗರು ಹಾಗೂ 148 ಹುಡುಗಿಯರನ್ನು ಅಂತಿಮವಾಗಿ ಆಯ್ಕೆಗೊಳಿಸುತ್ತಾರೆ. ಈ ರೀತಿ ಆಯ್ಕೆಗೊಂಡವರಿಗೆ ಬೆಳಗಿನ ಜಾವ 4 ಗಂಟೆಯಿಂದ ದೈನಂದಿನ ಚಟುವಟಿಕೆ ಆರಂಭಿಸಿ; ಮಧ್ಯರಾತ್ರಿ 12 ಗಂಟೆ ತನಕ ನಿರಂತರ ತರಬೇತಿಯಲ್ಲಿ ತೊಡಗಿಸಿ ವಿವಿಧ ಕಸರತ್ತು ಮಾಡಿಸಲಾಗುತ್ತದೆ.
ಹೀಗೆ ಗಣರಾಜ್ಯೋತ್ಸವಕ್ಕೆ 10 ದಿನಗಳ ಮೊದಲು; ಕಾರ್ಯಕ್ರಮ ನಡೆಯುವ ಇಂಡಿಯಾ ಗೇಟ್ ಸಮೀಪದ ರಾಜಪಥಕ್ಕೆ ಕರೆದೊಯ್ದು ಮತ್ತಷ್ಟು ಕಠಿಣ ರೀತಿಯಲ್ಲಿ ಅಭ್ಯಾಸ ಆರಂಭ. ಮುಂಜಾನೆ ಹಾಗೂ ಸಂಜೆಯ ಚಳಿ ನಡುವೆ ನಿತ್ಯ ನಾಲ್ಕೂವರೆ ಕೆ.ಜಿ. ತೂಕದ ರೈಫಲ್‍ನೊಂದಿಗೆ ಆರೆಂಟು ಕಿ.ಮೀ. ಸಂಚಲನ ಮೂಡಿಸಲಾಗುತ್ತದೆ.
ಅಲ್ಲಿ ಉತ್ತರ ರಾಜ್ಯಗಳ ಸಹಿತ ಇಡೀ ದೇಶದ ಕೆಡೆಟ್‍ಗಳ ಗುಂಪಿನಿಂದ; ಕಡೆಯ ಘಳಿಗೆಯಲ್ಲಿ ಮಹಿಳಾ ಎನ್‍ಸಿಸಿ ಪಥ ಸಂಚಲನವನ್ನು ರಾಜಪಥದಲ್ಲಿ ಮುನ್ನಡೆಸುವ ಹೊಣೆಗಾರಿಕೆಯನ್ನು ಕೊಡಗಿನ ಹೆಮ್ಮೆಯ ಕುವರಿ ಎ.ಜಿ. ಐಶ್ವರ್ಯ ದೇಚಮ್ಮಳಿಗೆ ಸೈನ್ಯಾಧಿಕಾರಿಗಳು ವಹಿಸುತ್ತಾರೆ. ಆ ಮುನ್ನ ನಡೆಸುವ ತರಬೇತಿ ಹಂತದಲ್ಲಿ ನವದೆಹಲಿಯ ಇಂಡಿಯಾಗೇಟ್ ಸಹಿತ ರಾಜಪಥ ತಲುಪಬೇಕಾದರೆ ಛಲದಿಂದ ಸಾಧನೆ ಮಾಡುವಂತೆ ನಿತ್ಯ ಹುರಿದುಂಬಿಸಿದ್ದು, ಐಶ್ವರ್ಯಳಿಗೆ ನೆನಪಾಗುತ್ತದೆ. ಮಾತ್ರವಲ್ಲದೆ ಪಂಜಾಬ್‍ನಂತಹ ರಾಜ್ಯಗಳ ಬಲಿಷ್ಠ ಹೆಂಗಳೆಯರ ನಡುವೆಯೂ ತನ್ನನ್ನು ಆಯ್ಕೆಮಾಡಿದ ಆ ಕ್ಷಣ ತನಗೇ ನಂಬಲು ಅಸಾಧ್ಯ ಎನಿಸಿಬಿಡುತ್ತದೆ.
ಮರು ಘಳಿಗೆಯಲ್ಲಿ ತನಗೆ ಲಭಿಸಿದ; ಮರೆಯಲಾರದ ಈ ಅವಕಾಶವನ್ನು ಶೇ. 100 ರಷ್ಟು ಸಾಮಥ್ರ್ಯದೊಂದಿಗೆ ಕಾರ್ಯಗತ ಗೊಳಿಸಲು ಸಂಕಲ್ಪ ತೊಡುತ್ತಾಳೆ. ಜ. 26 ರಂದು ನಿರ್ದಿಷ್ಟ ಸಮಯಕ್ಕೆ 6 ಕಿ.ಮೀ. ಪಥ ಸಂಚಲನದೊಂದಿಗೆ ಕಾರ್ಯಕ್ರಮ ವೇದಿಕೆ ತಲಪುತ್ತಿ ದ್ದಂತೆಯೇ ತೀರಾ ಬಳಲಿದ್ದರೂ ಕೂಡ; ರಾಷ್ಟ್ರಪತಿ ಸಹಿತ ಗಣ್ಯರೆಡೆಗೆ ‘ಕಂಟೇಜೆಂಟ್ ದೈನೇದೇಕ್’ ಎಂದು ಶಕ್ತಿ ಮೀರಿ ಆಜ್ಞೆ ಮಾಡುತ್ತಾ ‘ಸಲ್ಯೂಟ್’ ನೀಡುತ್ತಾಳೆ. 15 ಅಡಿಗಳ ಅಂತರದಲ್ಲಿ ‘ಸಾಮ್‍ನೇದೇಕ್’ ಎಂಬ ಮರು ಸೂಚನೆ ನೀಡುತ್ತಾ ಎನ್‍ಸಿಸಿ ಕೆಡೆಟ್‍ಗಳನ್ನು ನಿರ್ದಿಷ್ಟ ಸ್ಥಳದೆಡೆಗೆ ಮುನ್ನಡೆಸುತ್ತಾಳೆ.
ದೆಹಲಿ ಕ್ರೀಡಾಂಗಣದಲ್ಲಿ ಪಥ ಸಂಚಲನ ಪೂರೈಸಿದಾಗ; ಆನಂದಭಾಷ್ಪಗರೆದು ತನ್ನ ಬದುಕಿನಲ್ಲಿ ಮರೆಯಲಾರದ ಸಾಧನೆಗಾಗಿ ಐಶ್ವರ್ಯ ಹಾಗೂ ಸಹÀಪಾಠಿಗಳು ದಣಿವಾರಿಸಿಕೊಳ್ಳುತ್ತಾರೆ. ಜ. 27 ರಂದು ಒಂದಿಷ್ಟು ವಿಶ್ರಾಂತಿ ಪಡೆದು; ಮತ್ತೆ ಜ. 28 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ; ಗಣರಾಜ್ಯೋತ್ಸವ ಸೇನಾ ಸಮಾರಂಭದಲ್ಲಿ ಭಾಗಿಯಾಗುತ್ತಾಳೆ.
ಆ ದಿನವನ್ನು ಐಶ್ವರ್ಯ ತಾನು ಎಂದೂ ಮರೆಯಲಾರೆ ಎನ್ನಲು ಅಷ್ಟೇ ಮಹತ್ವವಿದೆ. ಭಾರತದ ಹೆಮ್ಮೆಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹುಟ್ಟಿದ ದಿನ ಈ ಜ. 28. ಈಕೆ ಪ್ರತಿನಿಧಿಸಿರುವ ಎನ್‍ಸಿಸಿ ತಂಡ ಕೂಡ ಫೀ.ಮಾ. ಕಾರ್ಯಪ್ಪ ಕಾಲೇಜು ವಿದ್ಯಾರ್ಥಿ ಸಮೂಹದ್ದು; ಆ ಪರ್ವದಿನದಂದೇ ತಾನು ಇಡೀ ದೇಶವನ್ನು ಪ್ರತಿನಿಧಿಸಿದ ಅತ್ಯುತ್ತಮ ‘ಕೆಡೆಟ್’ ಎಂಬ ಕೀರ್ತಿಗೆ ಭಾಜನಳಾಗಿ ತನ್ನ ತಂಡಕ್ಕೆ ಸಲ್ಲಬೇಕಾದ ಗೌರವವನ್ನು ಪ್ರಧಾನಿ ಕೈಯಿಂದ ಟ್ರೋಫಿ ಸಹಿತ ಪ್ರಶಂಸಾ ಪತ್ರ ಸಹಿತ ಸ್ವೀಕರಿಸಿದ್ದು ಆ ದಿನವೇ.
ಕೊನೆಯದಾಗಿ: ಈ ಮೇಲಿನಂತೆ ನಮ್ಮ ಹೆಮ್ಮೆಯ ಕುವರಿ ಐಶ್ವರ್ಯ ಬೆರಗುಗಣ್ಣಿನ ನೋಟ ಬೀರುತ್ತಾ; ತಾನು ಸಾಗಿದ ಪಥ; ಅನುಭವ ಹಂಚಿಕೊಂಡಾಗ ಸೋದರಿ ಅಂಬಿಕಾ; ತಂದೆ ಗಣೇಶ, ತಾಯಿ ಮೋಂತಿಯೊಂದಿಗೆ ತನ್ನ ಶಿಕ್ಷಕರು, ಬಂಧುಗಳು, ಸೈನ್ಯಾಧಿಕಾರಿಗಳು ಹಾಗೂ ಎನ್‍ಸಿಸಿ ಕೆಡೆಟ್‍ಗಳ ಸಹಿತ ತರಬೇತುದಾರರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾಳೆ.
ಭಾರತದ ರಾಷ್ಟ್ರಪತಿ ಹಾಗೂ ಪ್ರಧಾನಿ ಮೋದಿ ಸಹಿತ ಭೂಸೇನೆ, ವಾಯುಸೇನೆ, ನೌಕಾಸೇನೆಗಳ ಉನ್ನತ ಅಧಿಕಾರಿಗಳ ಜತೆ ಗಣ್ಯಾತಿ ಗಣ್ಯರ ಭೇಟಿಯನ್ನು ಮೆಲುಕು ಹಾಕುತ್ತಾ; ತಾನು ಮುಂದೆ ವಾಯುಸೇನೆಯ ಯುದ್ಧ ವಿಮಾನದ ‘ಪೈಲೆಟ್’ ಆಗಿ ದೇಶಸೇವೆ ಸಲ್ಲಿಸುವೆ ಎಂದು ಐಶ್ವರ್ಯ ಮುಂದಿನ ಸಾಧನೆಯ ಹೊಂಗನಸು ಕಾಣುತ್ತಿದ್ದಾಳೆ.