ಸೋಮವಾರಪೇಟೆ, ಮಾ. 19: ಶನಿವಾರಸಂತೆ ನಾಡಕಚೇರಿಯಲ್ಲಿ ಭ್ರಷ್ಟಾಚಾರದಿಂದಾಗಿ ದಲಿತರು, ಸಣ್ಣ ರೈತರು ಹಾಗೂ ಬಡವರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ನಾಡಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಚೇರಿಯ ಕೆಲ ಸಿಬ್ಬಂದಿಗಳು ಬಡವರ ಕೆಲಸಕಾರ್ಯಗಳನ್ನು ಸರಿಯಾದ ಸಮಯಕ್ಕೆ ನಿರ್ವಹಿಸುತ್ತಿಲ್ಲ. ಬಡ ರೈತರ ಭೂಮಿಗೆ ಹಕ್ಕುಪತ್ರ ನೀಡಲು ಮೀನಾಮೇಷ ಎಣಿಸುತ್ತಿದ್ದು, ಸಿರಿವಂತರ ಜಾಗಕ್ಕೆ ತುರ್ತು ಹಕ್ಕುಪತ್ರ ನೀಡುತ್ತಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್ ಆಗ್ರಹಿಸಿದರು.
ಫಾರಂ ನಂ. 50 ಮತ್ತು 53ರ ಕಡತಗಳನ್ನು ಹಾಗೂ 94ಸಿ ಅಡಿಯಲ್ಲಿ ನಿವೇಶನಕ್ಕಾಗಿ ಪಡೆದಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ದಲಿತರ, ಆದಿವಾಸಿಗಳ ಭೂಮಿಯನ್ನು ಕಬಳಿಸಿಕೊಂಡವರಿಂದ ತಕ್ಷಣ ಬಿಡಿಸಿಕೊಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಿರ್ವಾಣಪ್ಪ ಒತ್ತಾಯಿಸಿದರು.
ಈ ಸಂಬಂಧಿತ ಮನವಿಯನ್ನು ತಾಲೂಕು ತಹಸೀಲ್ದಾರ್ ಕೃಷ್ಣ ಅವರಿಗೆ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಕೆ.ಟಿ. ಆನಂದ, ಹೋಬಳಿ ಅಧ್ಯಕ್ಷ ಸಿದ್ದಯ್ಯ, ಪ್ರಮುಖರಾದ ಜಯಣ್ಣ, ಕೆ.ಎಂ. ದಿನೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.