ಸೋಮವಾರಪೇಟೆ, ಮಾ. 19: ತಾಲೂಕಿನ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಮೂಲತಃ ಬೆಂಗಳೂರಿನ ಮಹಾಲಕ್ಷ್ಮೀ ಬಡಾವಣೆಯ ನಿವಾಸಿ ಯಾಗಿದ್ದು, ಪ್ರಸ್ತುತ ಮಡಿಕೇರಿಯ ಟಿ.ಜಾನ್ ಎಸ್ಟೇಟ್ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನವೀನ್ (25) ಎಂಬಾತನೇ ಜಲಪಾತದಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಯಾಗಿದ್ದು, ಸಂಜೆ ವೇಳೆಗೆ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.
ಕಳೆದ ಕೆಲ ಸಮಯಗಳಿಂದ ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಅದೇ ಎಸ್ಟೇಟ್ನ ಚಾಲಕÀ ವೆಂಕಟೇಶ್ ಎಂಬಾತನೊಂದಿಗೆ ಬೈಕ್ನಲ್ಲಿ ಇಂದು ಮಧ್ಯಾಹ್ನ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದಾರೆ. ಮಳೆಗಾಲ ದಲ್ಲಿ ನೀರು ಧುಮ್ಮಿಕ್ಕುವ ಅತೀ ಅಪಾಯಕಾರಿ ಸ್ಥಳದಲ್ಲಿ ಈಜಾಡಲೆಂದು 12.30ರ ಸುಮಾರಿಗೆ ಬಟ್ಟೆ ಬಿಚ್ಚಿ ಈರ್ವರೂ ನೀರಿಗಿಳಿದಿದ್ದಾರೆ. ಈ ಸಂದರ್ಭ ನವೀನ್ ಅಪಾಯದ ಅರಿವಿಲ್ಲದೇ ಇನ್ನಷ್ಟು ಕಡಿದಾದ ಬಂಡೆಕಲ್ಲುಗಳ ಸನಿಹಕ್ಕೆ ತೆರಳಿದ್ದು, ಏಕಾಏಕಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ.
ತನ್ನ ಸ್ನೇಹಿತ ಕಣ್ಣೆದುರಿಗೇ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ ವೆಂಕಟೇಶ್, ಆತನ ರಕ್ಷಣೆಗೆ ಪ್ರಯತ್ನಪಟ್ಟರೂ ಯಾವದೇ ಫಲಕಾಣಲಿಲ್ಲ. ಪರಿಣಾಮ ಸುಮಾರು 20 ರಿಂದ 25 ಅಡಿ ಆಳಕ್ಕೆ ನವೀನ್ ಎಳೆಯಲ್ಪಟ್ಟು ನೀರಿನಲ್ಲಿ ಕಣ್ಮರೆ ಯಾಗಿದ್ದಾನೆ.
ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳೀಯರಾದ ವೆಂಕಟೇಶ್, ಉಲ್ಲಾಸ್ ಸೇರಿದಂತೆ ಗ್ರಾಮಸ್ಥರು ಹಾಗೂ ಸೋಮವಾರಪೇಟೆಯ ಆಟೋ ಚಾಲಕ ಹಸನಬ್ಬ, ಪ್ರಕಾಶ್, ಮೂರ್ತಿ ಅವರುಗಳ ಸಹಕಾರದಿಂದ ಮೃತದೇಹವನ್ನು ನೀರಿನಿಂದ ಹೊರತೆಗೆದು ಸೋಮವಾರಪೇಟೆಯ ಶವಾಗಾರಕ್ಕೆ ಸಾಗಿಸಿದರು. ಘಟನೆಯ ಬಗ್ಗೆ ಮೃತನ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಬೆಂಗಳೂರಿನಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವಿಗೂ ಮುನ್ನ ಸೆಲ್ಫಿ: ಮೃತ ನವೀನ್ ಜಲಪಾತದ ತಳಭಾಗದಲ್ಲಿ ನೀರಿಗೆ ಇಳಿಯುವ ಮುನ್ನ ತನ್ನ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದು, ನಂತರ ಮೊಬೈಲ್ನ್ನು ಕಲ್ಲುಬಂಡೆಯ ಮೇಲಿಟ್ಟು, ಬಟ್ಟೆ ಬಿಚ್ಚಿ ನೀರಿಗಿಳಿದಿದ್ದಾನೆ. ಕೊನೆಯ ಸೆಲ್ಫಿ ಮಾತ್ರ ಮೊಬೈಲ್ನಲ್ಲಿ ಕಂಡುಬಂದಿದೆ.
ಮಲ್ಲಳ್ಳಿ ಜಲಪಾತ ನೋಡಲು ಎಷ್ಟು ಆಕರ್ಷಣೀಯವೋ ಮೈಮರೆತರೆ ಅಷ್ಟೇ ಅಪಾಯಕಾರಿ. ಈ ಬಗ್ಗೆ ಪ್ರತಿನಿತ್ಯ ಸ್ಥಳೀಯರು ಎಚ್ಚರಿಕೆ ನೀಡುತ್ತಿದ್ದರೂ ಸಹ ಅದನ್ನು ಪಾಲಿಸದೇ ಮೋಜಿಗಾಗಿ ಕೆಲವರು ಈ ರೀತಿ ನೀರಿಗಿಳಿದು ಪ್ರಾಣ ಕಳೆದುಕೊಳ್ಳುತ್ತಿರುವದು ದುರಂತ.