ಸೋಮವಾರಪೇಟೆ, ಮಾ. 19: ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟು ಚನ್ನರಾಯಪಟ್ಟಣ ಮಾರ್ಗವಾಗಿ ಇಂದು ಮುಂಜಾನೆ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ರಾಜಹಂಸ ಬಸ್, ಹೊನವಳ್ಳಿ ಗ್ರಾಮದ ತಿರುವಿನಲ್ಲಿ ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಹೊನವಳ್ಳಿ ಗ್ರಾಮದ ತಿರುವಿನಲ್ಲಿರುವ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಒಂದು ಬದಿಗೆ ಉರುಳಿಬಿದ್ದಿದೆ.
ದಿಢೀರ್ ಅವಘಡದಿಂದಾಗಿ ನಿದ್ರೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಒಬ್ಬರಮೇಲೊಬ್ಬರು ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಬಸ್‍ನ ಬಾಗಿಲು ಇರುವ ಕಡೆಯೇ ಪಲ್ಟಿಯಾಗಿದ್ದರಿಂದ ತಕ್ಷಣಕ್ಕೆ ಪ್ರಯಾಣಿಕರು ಹೊರಬರಲು ಸಾಧ್ಯವಾಗಿಲ್ಲ. ಸೇತುವೆಯ ಕಂಬಕ್ಕೆ ಬಸ್‍ನ ಮೇಲ್ಭಾಗ ಅಪ್ಪಳಿಸಿದ್ದರಿಂದ ಒಂದು ಬದಿಯ ಕಿಟಕಿ, ಬಾಗಿಲು, ಗಾಜುಗಳು ಸಂಪೂರ್ಣ ಜಖಂಗೊಂಡಿವೆ.
ಬಸ್‍ನ ಮುಂಬದಿಯ ಗಾಜನ್ನು ಒಡೆದು ಗಾಯಾಳುಗಳನ್ನು ಹೊರ ತರಲಾಯಿತು. ಬಸ್‍ನಲ್ಲಿ ಒಟ್ಟು 25 ಮಂದಿ ಪ್ರಯಾಣಿಕರಿದ್ದು, ಇವರಲ್ಲಿ 8 ಮಂದಿಗೆ ಸಣ್ಣಪ್ರಮಾಣದ ಗಾಯಗಳಾಗಿವೆ. ಸೋಮವಾರಪೇಟೆಗೆ ಆಗಮಿಸುತ್ತಿದ್ದ ಸದಾನಂದ್, ಆದರ್ಶ್, ರಾಣಿ, ಸುಧಾ, ಆಸೀಫ್, ಸುನೀತಾ, ಮದನ್, ಹನುಮಂತ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ರಾಜಹಂಸ ಬಸ್ ತೀರಾ ಹಳೆಯದಾಗಿದ್ದು, ತಕ್ಷಣ ಬದಲಾಯಿಸಿ ಬದಲಿ ಬಸ್‍ಗಳನ್ನು ಇಂತಹ ಮಾರ್ಗಕ್ಕೆ ಅಳವಡಿಸಬೇಕು ಎಂದು ಪ್ರತ್ಯಕ್ಷದರ್ಶಿ ಪ್ರಯಾಣಿಕ ಸದಾನಂದ್ ಅವರು ಪತ್ರಿಕೆಯೊಂದಿಗೆ ಅಭಿಪ್ರಾಯಿಸಿದ್ದಾರೆ.