ಮಡಿಕೇರಿ, ಮಾ. 27: ಕಳೆದ ಒಂದು ವಾರದಿಂದ ಕಕ್ಕಬ್ಬೆ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಬೆಳೆಗಾರರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾಡಿಗಟ್ಟಲು ಯಶಸ್ವಿಯಾಗಿದೆ.ಕಳೆದ ಒಂದು ವಾರದಿಂದ ಈ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಗುಂಪಿನಲ್ಲಿದ್ದ ಒಂದು ಹೆಣ್ಣಾನೆ 5 ದಿನಗಳ ಹಿಂದೆಯಷ್ಟೇ ಮರಿಯಾನೆಗೆ ಜನ್ಮ ನೀಡಿತ್ತು. ಇದರಿಂದಾಗಿ ಕಾಡಾನೆಗಳ ಹಿಂಡು ಅಲ್ಲೇ ಸುತ್ತಾಡುತ್ತಾ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. 5 ದಿನಗಳ ಮರಿಯಾನೆ ಸೇರಿದಂತೆ 11 ಕಾಡಾನೆಗಳನ್ನು ಮರಳಿ ಪಡಿನಾಲ್ಕು ನಾಡು ಮೀಸಲು ಅರಣ್ಯಕ್ಕೆ ಅಟ್ಟಲಾಯಿತು.

ಕಾರ್ಯಾಚರಣೆಯಲ್ಲಿ ಭಾಗಮಂಡಲ ವಲಯ ಅರಣ್ಯಾಧಿಕಾರಿ ಚಂಗಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಾರ್ಯಾ ಚರಣೆಗೆ ಸ್ಥಳೀಯ ಗ್ರಾ.ಪಂ. ಸದಸ್ಯರು, ತೋಟದ ಮಾಲೀಕರು ಹಾಗೂ ಗ್ರಾಮಸ್ಥರು ಸಹಕಾರ ನೀಡಿದರು.