ಮಡಿಕೇರಿ, ಮಾ. 27: ಮಡಿಕೇರಿ ನಗರಸಭೆಯಿಂದ 3ನೇ ಹಂತದ ನಗರೋತ್ಥಾನ ಅಭಿವೃದ್ಧಿಗಾಗಿ ಸರಕಾರ ಬಿಡುಗಡೆಗೊಳಿಸಿರುವ ರೂ. 35 ಕೋಟಿ ಹಣ ಹಂಚಿಕೆಯಲ್ಲಿ ಪಕ್ಷಪಾತ ಮಾಡಲಾಗಿದೆ ಎಂದು; ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯ ರೊಳಗಿನ ಕಚ್ಚಾಟ ಬೀದಿ ರಂಪಾಟಕ್ಕೆ ಕಾರಣವಾಗಿದೆ.ನಗರಸಭೆಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನ ವಸತಿಯಲ್ಲಿ ಕೈಗೊಳ್ಳಬೇಕಾಗಿರುವ ಈ ಹಣದಲ್ಲಿ ನಗರ ಸಭೆಯ ಮಾಜಿ ಅಧ್ಯಕ್ಷ
ಹಾಗೂ ಹಾಲಿ ಸದಸ್ಯ ಹೆಚ್.ಎಂ. ನಂದಕುಮಾರ್ ಅವರ ವಾರ್ಡ್‍ಗೆ ರೂ. 90 ಲಕ್ಷ ಬಿಡುಗಡೆ ಮಾಡಲಾಗಿದ್ದು; ಉಳಿದ ಸದಸ್ಯರ ವಾರ್ಡ್‍ಗಳಿಗೆ ಕನಿಷ್ಟ ಹಣ ಒದಗಿಸಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಆರೋಪದೊಂದಿಗೆ ಇಂದು ಬೀದಿ ರಂಪಾಟ ನಡೆಯಿತು.
ನಗರಸಭೆಯ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಅವರು ಮೇಲಿನ ಆರೋಪದೊಂದಿಗೆ; ನಗರಸಭೆ ಎದುರು ಧರಣಿ ಆರಂಭಿಸಿದರು. ಈ ವೇಳೆಗೆ ದೇಶಪ್ರೇಮಿ ಯುವಕ ಸಂಘದ ಅರುಣ್ ಶೆಟ್ಟಿ ಕೂಡ ಅಲ್ಲಿ ಕಾಣಿಸಿಕೊಂಡು; ಪರಿಶಿಷ್ಟ ಪಂಗಡದ ಪ್ರತಿನಿಧಿ ಆಯ್ಕೆಗೊಂಡಿರುವ ಕಾವೇರಿ ಬಡಾವಣೆ ಹಾಗೂ ಸುತ್ತಲಿನ ಪ್ರದೇಶ ಪ್ರಗತಿಗೆ ಹಣ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಅಸಮಾಧಾನ ತೋಡಿಕೊಂಡರು.
ಈ ಸಂದರ್ಭ ನಗರ ಸಭೆಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಆಯುಕ್ತೆ ಶುಭ, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್, ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಸೇರಿದಂತೆ ಕೆಲವು ಸದಸ್ಯರು ಪ್ರತ್ಯೇಕ ಪ್ರತ್ಯೇಕ ಆಗಮಿಸಿ ಧರಣಿ ಕೈ ಬಿಡುವಂತೆ ಲೀಲಾ ಶೇಷಮ್ಮ ಅವರ ಮನ ವೊಲಿಸಲು ಪ್ರಯತ್ನಿಸಿ ವಿಫಲರಾದರು.
ಈ ಹಂತದಲ್ಲಿ ಲೀಲಾ ಶೇಷಮ್ಮ ತಮ್ಮ ವಾರ್ಡ್ ಜನ ತೀವ್ರ ಆಕ್ರೋಶಕ್ಕೆ ಒಳಗಾಗಿ; ಅನುದಾನದಲ್ಲಿ ತಾರತಮ್ಯದಿಂದ ತಾನು ಅವರಿಗೆ ಮುಖ ತೋರಿಸಲಾರದ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರಲ್ಲದೆ; ನ್ಯಾಯ ಸಿಗುವ ತನಕ ಮತ್ತು ಲಿಖಿತ ಅನುದಾನ ಭರವಸೆ ಲಭಿಸದೆ ಧರಣಿ ಕೈ ಬಿಡಲಾರೆ ಎಂದು ಸಿಡಿಮಿಡಿಯಾದರು.
ನಾಟಕೀಯ ಬೆಳವಣಿಗೆ
ಕೆಲವೇ ಸಮಯದಲ್ಲಿ ನಾಟಕೀಯ ಬೆಳವಣಿಗೆಯೆಂಬಂತೆ; ಧರಣಿ ಹಿಂಪಡೆದು ಅಧ್ಯಕ್ಷರ ಕೊಠಡಿಯಲ್ಲಿ ಮಾತುಕತೆಗೆ ಬಂದ ಲೀಲಾ ಶೇಷಮ್ಮ ಹಾಗೂ ಮಾಜಿ ಅಧ್ಯಕ್ಷ ಜುಲೇಕಾಬಿ ಅವರುಗಳು; ನಗರಸಭೆಯಿಂದ ಸದಸ್ಯರುಗಳಿಗೆ ನಗರೋತ್ಥಾನ ಅಭಿವೃದ್ಧಿ ಹಣ ಹಂಚಿಕೆ ಕುರಿತು ಯಾವದೇ ತಿಳುವಳಿಕೆ ತಮಗಿಲ್ಲವೆಂದು ಪ್ರತಿಪಾದಿಸಿದರು. ಈ ವೇಳೆ ಅಧ್ಯಕ್ಷರ ಕೊಠಡಿಗೆ ಬಂದ ಹಿರಿಯ ಸದಸ್ಯ ನಂದಕುಮಾರ್ ಹಾಗೂ ಲೀಲಾ ಶೇಷಮ್ಮ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.
(ಮೊದಲ ಪುಟದಿಂದ)
ನಂದಕುಮಾರ್ ಸ್ಪಷ್ಟನೆ
ಈ ವೇಳೆ ‘ಶಕ್ತಿ’ಯೊಂದಿಗೆ ಸ್ಪಷ್ಟನೆ ನೀಡಿದ ಹೆಚ್.ಎಂ. ನಂದಕುಮಾರ್ ಅವರು ಮಂಗಳಾದೇವಿ ನಗರ ಅಭಿವೃದ್ಧಿಗೆ ರೂ. 90 ಲಕ್ಷ ಬಗ್ಗೆ ಮಾತ್ರ ಎಲ್ಲರೂ ರಾಜಕೀಯ ದುರುದ್ದೇಶದಿಂದ ಟೀಕಿಸುತ್ತಿದ್ದು; ಮಲ್ಲಿಕಾರ್ಜುನ ನಗರ ಹಾಗೂ ಆ ವಾರ್ಡ್‍ಗೆ ರೂ. 1.14 ಕೋಟಿ ಅನುದಾನ ಒದಗಿಸಿರುವ ಬಗ್ಗೆ ಉದ್ದೇಶಪೂರ್ವಕ ಮರೆ ಮಾಚಲಾಗಿದೆ ಎಂದು ಬಹಿರಂಗಪಡಿಸಿದರು. ಅಲ್ಲದೆ ನಗರಸಭಾ ವ್ಯಾಪ್ತಿಯ ಎಲ್ಲಾ ಭಾಗಗಳಲ್ಲಿ ಪರಿಶಿಷ್ಟ ಜಾತಿ ಪಂಗಡದವರು ನೆಲೆಸಿರುವ ಕಡೆಗಳಿಗೆ ಅಲ್ಲಿನ ಜನಸಂಖ್ಯೆ ಅನುಸಾರ ಹಣ ಒದಗಿಸಲಾಗಿದೆ ಎಂದು ಅವರು ಸಮರ್ಥನೆ ನೀಡಿದರು.
ಆಯುಕ್ತೆ ಸ್ಪಷ್ಟೀಕರಣ
ಇಷ್ಟೆಲ್ಲ ಬೆಳವಣಿಗೆ ಕುರಿತು ಆಯುಕ್ತೆ ಶುಭ ಅವರು ಸ್ಪಷ್ಟೀಕರಣ ನೀಡುತ್ತಾ; ಸರಕಾರದ ಹಂತದಲ್ಲಿ ರೂ. 35 ಕೋಟಿ ಅನುದಾನದಿಂದ ಕೈಗೊಳ್ಳುವ ಕಾಮಗಾರಿಯು ಉಸ್ತುವಾರಿ ಸಚಿವರು; ಜಿಲ್ಲಾಧಿಕಾರಿಗಳ ಹಂತದಲ್ಲಿ ಶಾಸಕರ ಸಮ್ಮುಖ ನಿರ್ಧಾರವಾಗುವ ಕ್ರಿಯಾಯೋಜನೆಯಾದರೂ; ತಾವು ನಗರಸಭೆಯ ಎಲ್ಲಾ ಸದಸ್ಯರ ತಿಳುವಳಿಕೆಗೆ ತಂದು; ಆಯಾ ವಾರ್ಡ್‍ಗಳ ಕೆಲಸದ ಅಗತ್ಯಾನುಸಾರ ಮಾಹಿತಿ ಸಲ್ಲಿಸಿರುವದಾಗಿ ಖಚಿತ ಪಡಿಸಿದರು.
ಮರು ಹಂಚಿಕೆ ಪ್ರಯತ್ನ
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು; ವಿನಾಕಾರಣ ತಮ್ಮನ್ನು ಕೆಲವರು ಟೀಕೆಗೆ ಗುರಿಪಡಿಸುತ್ತಿರುವದಾಗಿ ಆಕ್ರೋಶ ವ್ಯಕ್ತಪಡಿಸಿದರು. ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸವಾಗಿದ್ದರೆ; ಮರು ಹಂಚಿಕೆಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಹೊಸ ಕ್ರಿಯಾಯೋಜನೆ ರೂಪಿಸಲಾಗುವದು ಎಂದು ‘ಶಕ್ತಿ’ಗೆ ಸುಳಿವು ನೀಡಿದರು.
ಗೊಂದಲ ತಿಳಿಗೊಳಿಸಲು ಯತ್ನ
ಈ ನಿಟ್ಟಿನಲ್ಲಿ ತೆರೆಮರೆಯ ಮುಸುಕಿನ ಗುದ್ದಾಟ, ಬೀದಿರಂಪಾಟಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಗೊಂದಲ ತಿಳಿಗೊಳಿಸುವ ಪ್ರಯತ್ನ ನಡೆಯಿತು. ಅಧ್ಯಕ್ಷೆ ಕಾವೇರಮ್ಮ ಹಾಗೂ ಆಯುಕ್ತೆ ಶುಭ ಸಹಿತ ಸದಸ್ಯರುಗಳಾದ ಕೆ.ಎಂ. ಗಣೇಶ್, ನಂದಕುಮಾರ್, ಜುಲೇಕಾಬಿ, ಲೀಲಾ ಶೇಷಮ್ಮ ಸೇರಿದಂತೆ ಸಂಧಾನ ಮಾತುಕತೆ ನಡೆಯಿತು.
ಬಿಜೆಪಿ ಸದಸ್ಯರ ಸ್ಪಷ್ಟನೆ
ನಗರೋತ್ಥಾನ ಅನುದಾನವು ನೇರವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನವಸತಿಗೆ ಮೀಸಲು ಹಣವಾಗಿದ್ದು; ಎಲ್ಲಾ ಸದಸ್ಯರ ಕ್ಷೇತ್ರಗಳಲ್ಲಿ ಅಗತ್ಯ ಕೆಲಸಕ್ಕೆ ಒತ್ತು ನೀಡಿ ಕ್ರಿಯಾಯೋಜನೆ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಮತ್ತು ಶಾಸಕರು ಕಾಮಗಾರಿಗೆ ಮಂಜೂರಾತಿ ನೀಡಬಹುದಾಗಿದೆ. ನಗರ ಸಭೆಯೇ ಇಲ್ಲಿ ಯೋಜನೆ ರೂಪಿಸುವ ಅಗತ್ಯ ಕಂಡು ಬರುವದಿಲ್ಲ. ತಿಳುವಳಿಕೆ ಕೊರತೆಯಿಂದ ಸದಸ್ಯರಲ್ಲಿ ಗೊಂದಲ ಉಂಟಾಗಿದೆ ಎಂದರು ಮಾಜಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರುಗಳು ಪ್ರತಿಕ್ರಿಯಿಸಿದ್ದಾರೆ.
ಆಡಳಿತ ಪಕ್ಷದ ಹಾಲಿ ಸದಸ್ಯರಾಗಿದ್ದುಕೊಂಡು ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಧರಣಿ ನಡೆಸುತ್ತಿರುವ ಹಂತ ತಲಪಿದ್ದು, ಆ ಪಕ್ಷದವರ ಆಡಳಿತ ವೈಫಲ್ಯಕ್ಕೆ ಸಾಕ್ಷಿಯೆಂದು ಪಿ.ಡಿ. ಪೊನ್ನಪ್ಪ, ಶಿವಕುಮಾರಿ ಹಾಗೂ ಸವಿತ ರಾಕೇಶ್ ಇವರುಗಳು ಅಭಿಪ್ರಾಯಪಟ್ಟರು.