ಮಡಿಕೇರಿ, ಮಾ. 27: ಕೊಡಗಿನ ಪ್ರಮುಖ ಪುಣ್ಯಸ್ಥಳಗಳಾಗಿರುವ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳನ್ನು ಕೊಡಗಿನ ಜನತೆ ಯಾವದೇ ಕಾರಣಕ್ಕೂ ಪ್ರವಾಸಿ ತಾಣಗಳೆಂದು ಒಪ್ಪುವದಿಲ್ಲ ಎಂಬದಾಗಿ ಶಾಸಕ ಕೆ.ಜಿ. ಬೋಪಯ್ಯ ಮತ್ತು ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಪ್ರತಿಪಾದಿಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ; ಈ ಬಗ್ಗೆ ಶಾಸಕದ್ವಯರು ಸಂಬಂಧಿಸಿದ ಇಲಾಖೆಯ ಗಮನ ಸೆಳೆದರು.ಪ್ರವಾಸೋದ್ಯಮ ಇಲಾಖೆ ವತಿಯಿಂದ ನೀಡಲಾಗುವ ಪ್ರವಾಸಿ ಟ್ಯಾಕ್ಸಿಯನ್ನು ಅರ್ಹರಿಗೆ ನೀಡುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದರು. ಬ್ಯಾಡ್ಜ್, ಇತರೆ ಅರ್ಹತೆ ಇರುವವರು ಸಿಗುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಕೆ.ಜಿ.ಬೋಪಯ್ಯ ಅವರು ಎಸ್.ಎಸ್.ಎಲ್.ಸಿ. ಉತ್ತೀರ್ಣರಾದವರು ಸಾಕಷ್ಟು ಮಂದಿ ಇದ್ದಾರೆ. ಅಂತಹ ಆಸಕ್ತರಿಗೆ ತರಬೇತಿ ನೀಡಿ, ಬ್ಯಾಡ್ಜ್ ಕೊಡಿಸುವುದು ಸಮಾಜ ಕಲ್ಯಾಣ ಇಲಾಖೆ ಹಾಗೂ ಐಟಿಡಿಪಿ ಇಲಾಖೆಯ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶನ ಮಾಡಬೇಕಿದೆ ಎಂದು ಅವರು ಹೇಳಿದರು.

ಎಷ್ಟು ಮಂದಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಪ್ರವಾಸಿ ಟ್ಯಾಕ್ಸಿಯನ್ನು ನೀಡಬೇಕು. ವಿರಾಜಪೇಟೆ ತಾಲೂಕಿನ ಏಕಲವ್ಯ ಮಾದರಿ ಪ್ರಾಥಮಿಕ ಶಾಲೆ ಆರಂಭವಾಗಿ ಎಷ್ಟು ವರ್ಷವಾಗಿದೆ. ಎಸ್.ಎಸ್.ಎಲ್.ಸಿ. ಉತ್ತೀರ್ಣ ರಾದವರು ಯಾರೂ ಇಲ್ಲವೇ ಎಂದು ಶಾಸಕರು ಪ್ರಶ್ನಿಸಿದರು.

ಪ್ರವಾಸಿ ಟ್ಯಾಕ್ಸಿಯನ್ನು ಆಯಾಯ ವರ್ಷವೇ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಸೂಚನೆ ನೀಡಿದರು.

ಚೇಲಾವರ, ಮಲ್ಲಳ್ಳಿ ಜಲಪಾತ ಪ್ರದೇಶಗಳಲ್ಲಿ ಮೆಟ್ಟಿಲು ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಮತ್ತಿತರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಈಗಾಗಲೇ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪೂರ್ಣ ಗೊಳಿಸುವಂತೆ ಕೆ.ಜಿ.ಬೋಪಯ್ಯ ಅವರು ಸೂಚನೆ ನೀಡಿದರು.

ಕೋಟೆಅಬ್ಬಿ, ಮಾದಾಪುರ, ದೇವರಕೊಲ್ಲಿಗಳಲ್ಲಿ ಇಲ್ಲಿನ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು. ಈ ಸ್ಥಳಗಳಲ್ಲಿ ಅಭಿವೃದ್ಧಿ ಪಡಿಸುವುದರ ಜೊತೆಗೆ ನಿರ್ವಹಣೆ ಮಾಡುವುದು ಅತೀ ಮುಖ್ಯ. ಮಾಂದಲ್ ಪಟ್ಟಿಯಲ್ಲಿ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಪ್ರಮುಖರಾದ ಕರುಂಬಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಇದುವರೆಗೆ 501 ಹೋಂ ಸ್ಟೇಗಳು ನೋಂದಣಿಯಾಗಿದ್ದು, ಅವುಗಳಿಗೆ ಸೂಕ್ತ ಪ್ರಮಾಣ ಪತ್ರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಹೋಂ ಸ್ಟೇ ಅಸೊಸಿಯೆಷನ್ ಸಮಿತಿ ಸದಸ್ಯರಾದ ಬಿ.ಜಿ. ಅನಂತಶಯನ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಕಾಣುತ್ತಿಲ್ಲ. ಬಂದ ಪ್ರವಾಸಿಗರಿಗೆ, ಬರೀ ರಸ್ತೆ ತೋರಿಸಲಾಗುತ್ತಿದೆಯೇ ಹೊರತು ಆಕರ್ಷಣೀಯವಾದಂತಹ ಹಾಗೂ ಕಣ್ಮನ ಸೆಳೆಯುವ ಚಿತ್ರಣಗಳು ಪ್ರವಾಸಿ ಸ್ಥಳಗಳಲ್ಲಿ ಇಲ್ಲ ಎಂದು ಅವರು ಸಭೆಯ ಗಮನಕ್ಕೆ ತಂದರು.

ಮೋಂತಿ ಗಣೇಶ್ ಅವರು ಮಾತನಾಡಿ ರಾಜಾಸೀಟು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಿಂದೆ ಸಮಿತಿ ರಚನೆ ಮಾಡಲಾಗಿತ್ತು, ಅದನ್ನು ಪುನರ್ ರಚನೆ ಮಾಡಬೇಕು. ರಾಜಾ ಸೀಟಿನ ಅಭಿವೃದ್ಧಿಗೆ ಸಂಬಂದಿ üಸಿದಂತೆ ಪಾರದರ್ಶಕತೆ ಕಾಪಾಡಬೇಕು ರಾಜಾಸೀಟಿನ ಸಂಗೀತಾ ಕಾರಂಜಿ ಸ್ಥಗಿತಗೊಂಡು ಸುಮಾರು ವರ್ಷಗಳೇ ಆಗಿದೆ. ಆದರೆ ಇನ್ನೂ ಸರಿಪಡಿಸಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ರಾಜಾಸೀಟಿನಲ್ಲಿ ಸಂಗ್ರಹ ವಾಗುವ ಟಿಕೇಟ್‍ನ ಹಣ ಬಳಕೆ ಮಾಡಿಕೊಂಡು ಅಲ್ಲಿನ ಅಭಿವೃದ್ಧಿಗೆ ಪಣತೊಡಬೇಕಿದೆ ಎಂದು ಸಲಹೆ ಮಾಡಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಜಗನ್ನಾಥ್ ಅವರು ಪ್ರವಾಸಿ ಟ್ಯಾಕ್ಸಿ ವಿತರಣೆ ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ತಾ.ಪಂ.ಅಧ್ಯಕ್ಷ ತೆಕ್ಕಡೆ ಶೋಭ ಮೋಹನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ.ಎ.ದೇವಯ್ಯ, ನಗರಸಭೆಯ ಆರೋಗ್ಯಾಧಿಕಾರಿ ರಮೇಶ್, ತಹಶೀಲ್ದಾರ್ ಕುಸುಮ, ಪರಿಸರಾಧಿಕಾರಿ ಗಣೇಶ್ ಇತರರು ಹಲವು ಮಾಹಿತಿ ನೀಡಿದರು.