ಭಾಗಮಂಡಲ, ಮಾ. 27: ಭಾಗಮಂಡಲ ಗ್ರಾಮಪಂಚಾಯಿತಿ ಮತ್ತು ದೇವಾಲಯದ ಮಧ್ಯೆ ಭಾಗಮಂಡಲ ವ್ಯಾಪ್ತಿಯಲ್ಲಿ ವಾಹನ ಸುಂಕ ವಸೂಲಾತಿಯ ಬಗ್ಗೆ ನಡೆಯುತ್ತಿರುವ ಗೊಂದಲದ ಬಗ್ಗೆ ಇಂದು ಪಂಚಾಯಿತಿ ವತಿಯಿಂದ ಸಾರ್ವಜನಿಕ ಜನಬೆಂಬಲ ಸಭೆಯನ್ನು ಭಾಗಮಂಡಲದಲ್ಲಿ ನಡೆಸಲಾಯಿತು. ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನುಮುತ್ತಪ್ಪ ಮಾತನಾಡಿ ಭಾಗಮಂಡಲ ಗ್ರಾಮಪಂಚಾಯಿತಿಗೆ ವಾಹನ ಸುಂಕ ವಸೂಲಾತಿ ಮಾಡಲು ಅಧಿಕಾರವಿದ್ದು ತಾನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾಗಿದ್ದ ಸಂದರ್ಭ ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನದ ಪರವಾಗಿ ಸುಂಕ ವಸೂಲಾತಿ ಮಾಡುವಂತೆ ತೀರ್ಮಾನ ಕೈಗೊಂಡ ಸಂದರ್ಭ ಅನೇಕರ ಸಲಹೆ ಸೂಚನೆ ಮೇರೆಗೆ ಗ್ರಾಮಪಂಚಾಯಿತಿಗೆ ಸುಂಕ ವಸೂಲಾತಿಗೆ ಅಧಿಕಾರವನ್ನು ಬಿಟ್ಟುಕೊಟ್ಟಿರುವದನ್ನು ಉಲ್ಲೇಖಿಸಿ ಇದಕ್ಕೆಲ್ಲ ಕೆಲವೇ ಕೆಲವು ವ್ಯಕ್ತಿಗಳ ಕುತಂತ್ರದಿಂದಾಗಿ ಅಪರ ಜಿಲ್ಲಾಧಿಕಾರಿಗಳು ಈ ರೀತಿ ದೇವಸ್ಥಾನಕ್ಕೆ ಸುಂಕ ವಸೂಲಾತಿ ಮಾಡುವಂತೆ ಆದೇಶ ಹೊರಡಿಸಿರುವದು ಸರಿಯಲ್ಲ ಎಂದರು. ಸ್ಥಳೀಯರಾದ ಅಮೆಬಾಲಕೃಷ್ಣ ಮಾತನಾಡಿ ಪಂಚಾಯಿತಿಗೆ ಆದಾಯದ ಮೂಲ ಕಡಿಮೆ ಇದ್ದು ಪಂಚಾಯಿತಿಯಿಂದಲೇ ವಾಹನ ಶುಲ್ಕ ವಸೂಲಾತಿ ಮಾಡುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದರು. ಗ್ರಾಮಪಂಚಾಯಿತಿ ಮಾಜಿ ಸದಸ್ಯ ನಂಜುಂಡಪ್ಪ ಮಾತನಾಡಿ 1979ರಿಂದ ಎರಡು ಅವಧಿಯಲ್ಲಿ ಪಂಚಾಯಿತಿಯ ಸದಸ್ಯನಾಗಿದ್ದ ಸಂದರ್ಭ ಅನುದಾನದ ಕೊರತೆ ಕಡಿಮೆ ಮಾಡಿ ವಾಹನ ವಸೂಲಾತಿ ಸುಂಕ ಇಲ್ಲದೆ ಇದ್ದ ಪಕ್ಷದಲ್ಲಿ ಪಂಚಾಯಿತಿಯ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ನಡೆಸಲು ಆಸ್ಪದ ಇಲ್ಲದೇ ಇರುವದರಿಂದ ವಾಹನ ಸುಂಕ ವಸೂಲಾತಿ ಅನಿವಾರ್ಯ ಎಂದರು.
ಇನ್ನೋರ್ವ ಮಾಜಿ ಸದಸ್ಯ ನಾಳಿಯಂಡ ಚೆಂಗಪ್ಪ ಮಾತನಾಡಿ ತನ್ನ ಮನೆಯನ್ನು ಉದಾಹರಿಸುತ್ತಾ ಮನೆ ಕಂದಾಯವನ್ನು ಗ್ರಾಮಪಂಚಾಯಿತಿ ವಸೂಲಾತಿ ಮಾಡುತ್ತಿದ್ದು ಅದೇ ರೀತಿ ಪಂಚಾಯಿತಿಗೆ ವಾಹನ ಶುಲ್ಕ ವಸೂಲಾತಿ ಮಾಡುವ ಅಧಿಕಾರವಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಮಾತನಾಡಿ ತಾನು ಸೇರಿದಂತೆ ಸ್ಥಳೀಯ ಸದಸ್ಯರನ್ನು ಒಳಗೊಂಡ ಸಮಿತಿಯಿಂದ ಅನೇಕ ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗದೆ ಯಾವದೋ ಸಂಘಟನೆಯ ಮನವಿಯನ್ನು ಪರಿಣಿಸಿ ಈ ರೀತಿಯ ಅವಾಂತರವನ್ನು ಜಿಲ್ಲಾಡಳಿತ ಮಾಡುತ್ತಿದ್ದು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮೂಲಕ ಪಾಠ ಕಲಿಸಬೇಕಾಗುತ್ತದೆ ಎಂದರು. ಸ್ಥಳೀಯರಾದ ಕುದುಕುಳಿ ಭರತ್ ಮಾತನಾಡಿ ಭಾಗಮಂಡಲ ತಲಕಾವೇರಿ ವಿಷಯವಾಗಿ ಮೂಲ ಸ್ವರೂಪದ ರಚನೆಯ ಹೆಸರಿನಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುತ್ತಿದ್ದು ಇಲ್ಲಿನ ಸಮಸ್ಯೆಯ ಬಗ್ಗೆ ಚಿಂತಿಸದೆ ತೊಂದರೆ ಕೊಡುತ್ತಿರುವ ಬಗ್ಗೆ ಇನ್ನು ನಾವು ಜಾಗೃತರಾಗಿರಬೇಕಾಗುತ್ತದೆ ಎಂದರು.
ತಲಕಾವೇರಿಯ ಅರ್ಚಕರಾದ ನಾರಾಯಣಾಚಾರ್ ಮಾತನಾಡಿ ಪಂಚಾಯಿತಿ ಮತ್ತು ದೇವಸ್ಥಾನದ ಬಗ್ಗೆ ಇರುವ ಗೊಂದಲಗಳನ್ನು ಸರಿಪಡಿಸಿಕೊಂಡು ಉತ್ತಮ ಕಾರ್ಯ ಕೈಗೊಳ್ಳಲು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿಯ ಕನಸನ್ನು ಸರಿಪಡಿಸಲು ಪಂಚಾಯಿತಿಯು ವಾಹನ ಶುಲ್ಕ ವಸೂಲಾತಿ ಮಾಡುತ್ತಿದೆ ಎಂದರು. ಕುಯ್ಯಮುಡಿ ಮನೋಜ್ ಮಾತನಾಡಿ, ಈ ಎಲ್ಲಾ ಅವಾಂತರಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಮಾಡಿಸುತ್ತಿರುವದು ಕೊಡಗು ಏಕೀಕರಣ ರಂಗ ಎಂದು ಆರೋಪಿಸಿದರು. ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಕಾಳನ ರವಿ ಮಾತನಾಡಿ ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿಯು ವಾಹನ ಸುಂಕ ವಸೂಲಾತಿಯನ್ನು ಮಾಡುತ್ತಾ ಬಂದಿದ್ದು ಇದರಿಂದ ಬರುವ ಆದಾಯವನ್ನು ಪಂಚಾಯಿತಿಗೆ ಒಳಪಟ್ಟ ಗ್ರಾಮಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಅಲ್ಲದೆ ಹಲವು ಸಂದರ್ಭಗಳಲ್ಲಿ ಪಂಚಾಯಿತಿಗೆ ಹೆಚ್ಚಿನ ಹಣ ವ್ಯಯ ಮಾಡಬೇಕಾಗುತ್ತದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಮಾತನಾಡಿ ಪಂಚಾಯಿತಿಗೆ ಬರುವ ಆದಾಯ ಮೂಲಕ್ಕೆ ಕತ್ತರಿ ಹಾಕುವ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಸಂಧ್ಯಾ, ಉಪಾಧ್ಯಕ್ಷೆ ಭವಾನಿ, ಗ್ರಾಮಪಂಚಾಯಿತಿ ಸದಸ್ಯರಾದ ಮಾಜಿ ಅಧ್ಯಕ್ಷ ಕರೀಂ, ಭಾಸ್ಕರ್, ರಾಜೀವ ರೈ, ಪುರುಷೋತ್ತಮ, ಯೋಗಾನಂದ, ಹರಿಣಿ, ಸಾವಿತ್ರಿ, ಪ್ರಮೀಳ,, ಮಾಜಿ ಸದಸ್ಯರಾದ ದಂಡಿನ ಜಯಂತ್, ಪದ್ಮಯ್ಯ , ಸುನಿಲ್‍ಪತ್ರಾವೊ ಹರ್ಷ ಇದ್ದರು.
-ಸುನಿಲ್ ಕುಯ್ಯಮುಡಿ