ಮಡಿಕೇರಿ, ಮಾ. 27: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ಕುಟುಂಬವಾರು ಕ್ರಿಕೆಟ್ ಹಬ್ಬ ನಡೆಯಲಿದ್ದು, ಈ ಸಂಬಂಧ ಪೂರ್ವ ಸಿದ್ಧತಾ ಸಭೆ ನಡೆಯಿತು. ಕೊಡಗು ಗೌಡ ಯುವ ವೇದಿಕೆ ಹಾಗೂ ಪೈಕೇರ ಕುಟುಂಬಸ್ಥರ ಜಂಟಿ ಸಭೆಯಲ್ಲಿ ಪಂದ್ಯಾವಳಿ ನಡೆಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಏ.21ರ ಉದ್ಘಾಟನಾ ಸಮಾರಂಭದಂದು ಜನಾಂಗದ ಕ್ರೀಡಾಪಟು ಗಳನ್ನೊಳಗಂಡ ತಂಡದಿಂದ ಶ್ರೀ ಓಂಕಾರೇಶ್ವರ ದೇವಾಲಯದಿಂದ ಕ್ರೀಡಾ ಜ್ಯೋತಿಯೊಂದಿಗೆ ಫೀ.ಮಾ.ಕಾರ್ಯಪ್ಪ ವೃತ್ತಕ್ಕೆ ತೆರಳಲು ನಿರ್ಧರಿಸಲಾಯಿತು. ಅಲ್ಲಿಂದ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುತ್ತಾ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸುವಂತೆ ತೀರ್ಮಾನಿಸ ಲಾಯಿತು. ಮೈದಾನದಲ್ಲಿ ಕ್ರಿಕೆಟ್ ಹಬ್ಬದಲ್ಲಿ ಭಾಗವಹಿಸುವ ತಂಡಗಳು ಹಾಗೂ ಇದುವರೆಗೆ ಪಂದ್ಯಾವಳಿ ಆಯೋಜನೆ ಮಾಡಿದ ಹಾಗೂ ಗೆಲುವು ಸಾಧಿಸಿದ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಸಲು ತೀರ್ಮಾನಿಸಲಾಯಿತು.ಉದ್ಘಾಟನಾ ಸಮಾರಂಭದಂದು ಸ್ವಾಗತ ನೃತ್ಯ, ಗೀತೆಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪ್ರದರ್ಶನ ಪಂದ್ಯಾಟ ಏರ್ಪಡಿಸುವಂತೆ ನಿರ್ಧರಿಸಲಾಯಿತು. 17 ದಿನಗಳ ಕಾಲ ನಡೆಯುವ ಪಂದ್ಯಾವಳಿ ಸಂದರ್ಭ ಸಾರ್ವಜನಿಕವಾಗಿ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ, ಹಾಗೂ ಉಚಿತ ಮಧುಮೇಹ ತಪಾಸಣಾ ಶಿಬಿರ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಸಮಾರೋಪ
ಅಂತಿಮ ಪಂದ್ಯಾವಳಿ ಹಾಗೂ ಸಮಾರೋಪ ಸಮಾರಂಭ ಮೇ 7ರಂದು ನಡೆಯಲಿದೆ. ಅಂದು ಮಧ್ಯಾಹ್ನದವರೆಗೆ ಪಂದ್ಯಾವಳಿ ನಡೆಯಲಿದ್ದು, ಮಧ್ಯಾಹ್ನದ ನಂತರ ಸಂಜೆ 4 ಗಂಟೆವರೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ವಿಶೇಷವಾಗಿ ಮೈಸೂರಿನ ಕಲಾತಂಡದಿಂದ ‘ಇನ್ಸ್ಟ್ರುಮೆಂಟಲ್ ಲೈವ್ ಪ್ರೋಗ್ರಾಂ’ ಆಯೋಜಿಸಲಾಗಿದೆ. ಇದರೊಂದಿಗೆ ಹಾಸ್ಯ ಸಂಜೆ ಏರ್ಪಡಿಸುವ ಬಗ್ಗೆಯೂ ಚಿಂತನೆ ಹರಿಸಲಾಗಿದೆ. ನಂತರ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಕ್ರೀಡಾ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವಂತೆ ತೀರ್ಮಾನಿಸಲಾಯಿತು. ಪಂದ್ಯಾವಳಿ ಸಂದರ್ಭ ಇನ್ನಿತರ ಸಾಹಸ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಚರ್ಚಿಸಲಾಯಿತು.
ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೈಕೇರ ಕುಟುಂಬದ ಪಟ್ಟದಾರ ನಂಜುಂಡ, ಕ್ರೀಡಾ ಸಮಿತಿ ಅಧ್ಯಕ್ಷ ಅನಂತ್‍ರಾಂ, ಕಾರ್ಯದರ್ಶಿ ಮಾಚಯ್ಯ, ಯುವ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಇದ್ದರು. ಯುವ ವೇದಿಕೆ ಪದಾಧಿಕಾರಿಗಳು, ಪೈಕೇರ ಕುಟುಂಬಸ್ಥರು ಪಾಲ್ಗೊಂಡಿದ್ದರು.