ಮಡಿಕೇರಿ, ಮಾ. 29: ಏಪ್ರಿಲ್ 2 ರಂದು ಪ್ರಥಮ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಶೇಕಡವಾರು ಯಶಸ್ಸಿಗೆ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ-ಸಂಸ್ಥೆಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕೋರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಸಿದ್ಧತೆ ಬಗ್ಗೆ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋವನ್ನು ಕಡ್ಡಾಯವಾಗಿ ಹಾಕಬೇಕು. ಕೊಡಗು ಜಿಲ್ಲೆಯಿಂದ ಹೊರ ಹೋಗುವ ಹಾಗೂ ಬರುವ ವಲಸೆ ಮಕ್ಕಳು, ಜೊತೆಗೆ ಕಳೆದ ಬಾರಿ ಪಲ್ಸ್ ಪೋಲಿಯೋದಿಂದ ಹೊರಗುಳಿದ ಮಕ್ಕಳನ್ನು ಗುರ್ತಿಸಿ ಪಲ್ಸ್ ಪೋಲಿಯೋ ಹನಿ ಹಾಕಬೇಕು. ಹಾಗೆಯೇ ಜಿಲ್ಲೆಯ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ತಂಡ ರಚಿಸಿ ಪಲ್ಸ್ ಪೊಲೀಯೋ ಹನಿ ಹಾಕುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿ.ಪಂ. ಸಿಇಓ ಚಾರುಲತಾ ಸೋಮಲ್ ಮಾತನಾಡಿ, ಪಲ್ಸ್ ಪೋಲಿಯೋ ಜಿಲ್ಲೆಯಲ್ಲಿ ಯಶಸ್ವಿಯಾಗಲು ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್ಸಿಹೆಚ್ ಅಧಿಕಾರಿ ಡಾ. ನಿಲೇಶ್ ಅವರು ಜಿಲ್ಲೆಯಲ್ಲಿ ಒಟ್ಟು 5,76,086 ಜನಸಂಖ್ಯೆ ಇದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ, ಜಿಲ್ಲಾ ಸರ್ಜನ್ ಡಾ. ಅಜೀಜ್, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ನಗರಸಭೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.