ಸೋಮವಾರಪೇಟೆ, ಮಾ. 29: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿರುವ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು, ತಪ್ಪಿದಲ್ಲಿ ಗ್ರಾ.ಪಂ. ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದೆ.

ಗ್ರಾಮದಲ್ಲಿ ಸಮರ್ಪಕ ವಿದ್ಯುತ್ ದೀಪಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಾಗಿಲ್ಲ. ಅತೀ ಹೆಚ್ಚು ಜನವಸತಿ ಪ್ರದೇಶವಾಗಿರುವ ಕಲ್ಕಂದೂರು ಕಾಲೋನಿಯ ರಸ್ತೆಗಳು ದುಸ್ಥಿತಿಗೆ ತಲಪಿದ್ದು, ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಜನಶಕ್ತಿ ವೇದಿಕೆಯ ಪದಾಧಿಕಾರಿಗಳು ಆರೋಪಿಸಿದ್ದು, ತಕ್ಷಣ ಸಮಸ್ಯೆ ಸರಿಪಡಿಸುವಂತೆ ಗ್ರಾ.ಪಂ. ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಲ್ಕಂದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಪ್ರಮುಖ ನೀರಿನ ಪೈಪ್‍ನಿಂದ ಬೇರೆಯವರಿಗೆ ಯಾವದೇ ಸಂಪರ್ಕ ನೀಡಬಾರದು. ಮಳೆಗಾಲ ಪ್ರಾರಂಭವಾಗುವದರೊಳಗೆ ಗ್ರಾಮದಲ್ಲಿ 50 ಸಾವಿರ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಗ್ರಾ.ಪಂ. ಮುಂಭಾಗ ಆಹೋರಾತ್ರಿ ಧರಣಿ ನಡೆಸಲಾಗುವದು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಕೆ.ಪಿ. ರವೀಶ್ ಎಚ್ಚರಿಕೆ ನೀಡಿದರು.

ಈ ಸಂಬಂಧಿತ ಮನವಿ ಪತ್ರವನ್ನು ಗ್ರಾ.ಪಂ. ಅಧ್ಯಕ್ಷೆ ರೇಣುಕ ವೆಂಕಟೇಶ್, ಉಪಾಧ್ಯಕ್ಷ ಮಿಥುನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್ ಅವರುಗಳಿಗೆ ನೀಡಲಾಯಿತು. ಈ ಸಂದರ್ಭ ಕಾರ್ಯದರ್ಶಿ ಅಬ್ದುಲ್ ಸಲಾಂ, ಕರವೇ ನಗರಾಧ್ಯಕ್ಷ ಮಂಜುನಾಥ್, ಖಜಾಂಚಿ ಸಂತೋಷ್, ಜನಶಕ್ತಿ ವೇದಿಕೆಯ ಗುರುಶಂಕರ್, ಇಬ್ರಾಹಿಂ, ಹಸೈನಾರ್, ಆನಂದ್, ರಮೇಶ್, ಸಿದ್ದೀಕ್, ಉಮ್ಮರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.