ಸೋಮವಾರಪೇಟೆ, ಮಾ. 29: ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ತೋಟಗಾರಿಕಾ ಬೆಳೆಗಳಿಗೆ ವಿಮೆಯನ್ನು ಕಟ್ಟಿದ ರೈತರಿಗೆ ಯಾವದೇ ಪರಿಹಾರ ದೊರೆತಿಲ್ಲ. ಮಾರ್ಚ್ 31ರೊಳಗಾಗಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ತಾಲೂಕು ಸಹಕಾರ ಯೂನಿಯನ್‍ನ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ತಾಲೂಕು ಸಹಕಾರ ಯೂನಿಯನ್‍ನ ಅಧ್ಯಕ್ಷ ಕೆ.ಟಿ. ಪರಮೇಶ್ ಮಾತನಾಡಿ, ಫಸಲ್ ಭೀಮಾ ಯೋಜನೆಯಡಿ ತೋಟ ಗಾರಿಕಾ ಬೆಳೆಗಳಿಗೆ ಅನ್ವಯಿಸುವಂತೆ ಕಾಳುಮೆಣಸಿಗೆ ಶೇಕಡ 5 ಹಾಗೂ ಭತ್ತಕ್ಕೆ ಶೇಕಡ 2 ವಿಮೆಯನ್ನು ಕಟ್ಟಲಾಗಿದೆ. ಆದರೆ ಇದುವರೆಗೂ ರೈತರಿಗೆ ಪರಿಹಾರದ ಹಣ ಪಾವತಿ ಆಗಿಲ್ಲ ಎಂದು ದೂರಿದರು.

ಭಾರತ ಸರಕಾರದ ನೀತಿಯಂತೆ ಎಲ್ಲಾ ರೈತರುಗಳನ್ನು ಬೆಳೆ ವಿಮೆ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯುವಂತಾಗಲು ವಿಮೆಗೆ ಒಳಪಡುವ ಬೆಳೆಗಳನ್ನು ಗುರುತಿಸಬೇಕು. ರೈತರು ಬೆಳೆದ ಬೆಳೆಗೆ ವಿಮೆ ಮಾಡಿಸುವದು ಅತ್ಯವಶ್ಯಕ ವಾಗಿರುತ್ತದೆ. ಆದರೆ ರೈತರಿಗೆ ವಿಮೆ ಪರಿಹಾರ ನೀಡದೇ ಶೋಷಣೆ ಮಾಡಲಾಗುತ್ತಿದೆ ಎಂದು ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಸ್.ಬಿ. ಭರತ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ವಯ ಎಲ್ಲಾ ರೈತರು ಬೆಳೆದ ಬೆಳೆ ವಿಮೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಬೆಳೆಗಳನ್ನು ಕಡ್ಡಾಯವಾಗಿ ವಿಮೆ ಮಾಡಿಸ ಬೇಕಾಗಿದೆ. ಆದರೆ ಬೆಳೆ ನಷ್ಟಕ್ಕೆ ಪರಿಹಾರ ನೀಡುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಮಾರ್ಚ್ 31ರೊಳಗಾಗಿ ಪರಿಹರಿಸಬೇಕು. ಕೊಡಗು ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ಕೇಂದ್ರ ಸಹಕಾರಿ ಬ್ಯಾಂಕ್ ರೈತರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ದಿನೇಶ್, ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಟಿ.ಕೆ. ರಮೇಶ್ ಉಪಸ್ಥಿತರಿದ್ದರು.