ವೀರಾಜಪೇಟೆ, ಮಾ. 29: ತೋಟಕ್ಕೆ ಹೋಗುವ ದಾರಿಯ ಕುರಿತು ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಬೆದರಿಕೆ ಗುಂಡು ಹಾರಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆ ಬಿಟ್ಟಂಗಾಲದ ಎಂ. ಪೂಮಣಿ ಎಂಬವರನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಗೆ ಸಮೀಪದ ಬಿಟ್ಟಂಗಾಲ ಗ್ರಾಮದ ಸಿ. ನಾಣಯ್ಯ ಎಂಬವರು ತಾ. 26 ರಂದು ತಮ್ಮ ತೋಟಕ್ಕೆ ಹೋಗುತ್ತಿರುವಾಗ ಪಕ್ಕದ ತೋಟದ ಪೂಮಣಿ ಎಂಬವರು ತನಗೆ ಸೇರಿದ ರಸ್ತೆಯ ಜಾಗದಲ್ಲಿ ಯಾರನ್ನು ಸಂಚರಿಸಲು ಬಿಡುವದಿಲ್ಲ ಎಂದು ಗದರಿಸಿದಾಗ ನಾಣಯ್ಯ ಇದನ್ನು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತೆರಳಿದಾಗ ಪೂಮಣಿ ತನ್ನ ಕೈಯಲ್ಲಿದ್ದ ಒಂಟಿ ನಳಿಗೆ ಬಂದೂಕಿನಿಂದ ಬೆದರಿಕೆ ಗುಂಡು ಹಾರಿಸಿದ್ದಾರೆ. ಇದರಿಂದ ಗಾಬರಿಗೊಂಡ ನಾಣಯ್ಯ ಅವರು ಗ್ರಾಮಾಂತರ ಪೊಲೀಸ್À ಠಾಣೆಗೆ ದೂರು ನೀಡಿದರು.
ಸಬ್‍ಇನ್ಸ್‍ಪೆಕ್ಟರ್ ನಂಜುಂಡ ಸ್ವಾಮಿ ಅವರು ಮಹಜರು ನಡೆಸಿ, ಪ್ರಕರಣ ದಾಖಲಿಸಿ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ.