ಮಡಿಕೇರಿ, ಮಾ.29: ಹೇವಿಳಂಬಿ ಸಂವತ್ಸರ ಚೈತ್ರ ಮಾಸದ ಚಾಂದ್ರಮಾನ ಯುಗಾದಿ ಹಬ್ಬವನ್ನು ನಾಡಿನೆಲ್ಲೆಡೆ ಸಡಗರದಿಂದ ಆಚರಿಸಲಾಯಿತು. ಕೆಲವೆಡೆ ನಿನ್ನೆ ಹಾಗೂ ಇಂದು ನೂತನ ಸಂವತ್ಸರವನ್ನು ಆಚರಿಸುವ ಮೂಲಕ ಬದುಕಿನ ನೋವು - ನಲಿವನ್ನು ಸಮಾನವಾಗಿ ಸ್ವೀಕರಿಸುವ ಸಂದೇಶದೊಂದಿಗೆ ಬೇವು-ಬೆಲ್ಲ ಸವಿಯಲಾಯಿತು.
ನಾಡಿನ ದೇವಾಲಯಗಳಲ್ಲಿ ಕೂಡ ನೂತನ ಸಂವತ್ಸರದ ಪಂಚಾಂಗ ಫಲ ಶ್ರವಣದೊಂದಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಭಕ್ತರಿಗೆ ಬೇವು - ಬೆಲ್ಲ ಹಂಚಿ ಹೊಸ ವರ್ಷವನ್ನು ಸಾಮೂಹಿಕವಾಗಿ ಕೈಗೊಳ್ಳಲಾಯಿತು. ಬಹುತೇಕ ದೇವಾಲಯಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪೂಜಾದಿಗಳಲ್ಲಿ ಪಾಲ್ಗೊಂಡಿದ್ದರು.
ಕುಶಾಲನಗರ : ಕುಶಾಲನಗರ ಹೋಬಳಿ ಬಿಜೆಪಿ ಘಟಕದ ಆಶ್ರಯದಲ್ಲಿ ಕೂಡಿಗೆಯ ಶ್ರೀಶಕ್ತಿ ವೃದ್ದಾಶ್ರಮದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಮಡಿಕೇರಿ ಕ್ಷೇತ್ರದ ಶಾಸಕÀ ಎಂ.ಪಿ. ಅಪ್ಪಚ್ಚುರಂಜನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮ ವಾಸಿಗಳಿಗೆ ಬೇವು-ಬೆಲ್ಲ ಹಂಚಲಾಯಿತು. ಜಿ.ಪಂ. ಸದಸ್ಯೆ ಮಂಜುಳ, ತಾ.ಪಂ. ಸದಸ್ಯ ಗಣೇಶ್ ಇದ್ದರು.
ಈ ಸಂದರ್ಭ ಆಶ್ರಮದ ವ್ಯವಸ್ಥಾಪಕರೊಂದಿಗೆ ಮಾಹಿತಿ ಪಡೆದುಕೊಂಡ ಶಾಸಕರು ಸುದ್ದಿಗಾರರೊಂದಿಗೆ ಮಾತನಾಡಿ, ಆಶ್ರಮ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶಾಶ್ವತ ಕಟ್ಟಡ ಒದಗಿಸಲು ಹಾಗೂ ವೃದ್ಧರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು. ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ಕುಶಾಲನಗರದ ಎಲ್ಲೆಡೆ ಯುಗಾದಿ ಆಚರಣೆಯೊಂದಿಗೆ ನೂತನ ಸಂವತ್ಸರವನ್ನು ಬರಮಾಡಿ ಕೊಂಡರು. ಸ್ಥಳೀಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಕುಶಾಲನಗರದ ಗಣಪತಿ ದೇವಾಲಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ದೇವಾಲಯಗಳಲ್ಲಿ ಬೆಳಗಿನಿಂದ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡರು.
ಕುಶಾಲನಗರ ದೇವಾಲಯಗಳ ಒಕ್ಕೂಟದ ವತಿಯಿಂದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಸಾಮೂಹಿಕ ಪೂಜಾ ಕಾರ್ಯಕ್ರಮ ನಡೆಯಿತು. ಪಟ್ಟಣ ಹಾಗೂ ಗ್ರಾಮಗಳ 15 ಕ್ಕೂ ಅಧಿಕ ದೇವಾಲಯಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ದೇವಾಲಯಕ್ಕೆ ತೆರಳಿ ಫಲಪುಷ್ಪ ಸಮರ್ಪಣೆ ನೆರವೇರಿಸಿದರು.
ಗೋಣಿಕೊಪ್ಪಲು: ಕೊಡಗು ಜಿಲ್ಲಾ ಬಲಿಜ ಸಮಾಜ ಮತ್ತು ನಾಪೆÇೀಕ್ಲು ಶ್ರೀ ವೆಂಕಟೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇಂದು ಸಾಮೂಹಿಕ ಯುಗಾದಿ ಹಬ್ಬವನ್ನು ಆಚರಿಸಲಾಯಿತು.
ಕೊಡಗು ಜಿಲ್ಲಾ ಬಲಿಜ ಸಮಾಜದ ಅಭ್ಯುದಯದ ನಿಟ್ಟಿನಲ್ಲಿ ಸಂಕಲ್ಪ ಪೂಜೆ, ಮಹಾಪೂಜೆಯನ್ನು ಅರ್ಚಕ ರಾಘವೇಂದ್ರ ನೆರವೇರಿಸಿದರು.
ಬೇವು ಬೆಲ್ಲ, ಪ್ರಸಾದ ವಿತರಣೆ ಹಾಗೂ ಲಘು ಉಪಾಹಾರ ಸೇವನೆ ನಂತರ ಸಾಮೂಹಿಕ ಯುಗಾದಿ ಆಚರಣೆ ಅವಶ್ಯಕತೆ ಕುರಿತು ಜಿಲ್ಲಾಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಬಲಿಜ ಬಾಂಧವರಿಗೆ ಮಾಹಿತಿ ನೀಡಿದರು.