ಭಾರತ ತಂಡದಲ್ಲಿ ಮಿಂಚಿನ ಸಂಚಲನ, ನೋಡು ನೋಡುತ್ತಿದ್ದಂತೆ ಆಸ್ಟ್ರೇಲಿಯಾದ ಮುಖ್ಯ ವಿಕೆಟ್‍ಗಳ ಪತನ. ಕೊನೆಗೊಮ್ಮೆ 300 ರನ್‍ಗಳಿಗೆ ಆಸ್ಟ್ರೇಲಿಯಾ ಸರ್ವ ಪತನ. ಬೌಲಿಂಗ್‍ನಲ್ಲಿ ಈ ಭೀಮಬಲ ಬರಲು ಕಾರಣವೇನು ? ಅಲ್ಲಿ ನಡೆದ ಕೈ ಚಳಕವೇನು ? ಎಂಬದಕ್ಕೆಲ್ಲಾ ಉತ್ತರ ಚೈನಾಮನ್ ಕುಲದೀಪ್ ಯಾದವ್. ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಎಡಗೈ ಸ್ಪಿನ್ನರ್ ಕುಲದೀಪ್ ತನ್ನ ಸ್ಪಿನ್ ಮಾಂತ್ರಿಕತೆಯನ್ನು ತೋರಿದನು. ಈತನ ಚೈನಾಮನ್ ಬೌಲಿಂಗ್‍ಗೆ ಆಸ್ಟ್ರೇಲಿಯಾ ತತ್ತರಿಸಿ ಹೋಯಿತು. ಬೌಲಿಂಗ್ ಎದುರಿಸಲಾರದೇ ಅರ್ಥವಾಗದೇ ಪರದಾಡಿತ್ತು. ಈತನ ಬೆಂಕಿಯ ಚೆಂಡುಗಳ ಎಸೆÀತ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿತು.

ದಿಟ್ಟ ನಡೆ : ಭಾರತ ವಿಶ್ವ ಕ್ರಿಕೆಟ್‍ನ ಬಲಾಢ್ಯ ತಂಡ. ಆಟದಂತೆ ತಂಡದ ನಡೆಗಳು ಕೂಡ ಶೂರತನದ್ದೇ, ಅಂತೇ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ಟ್ ಪಂದ್ಯದಲ್ಲಿ ಕೊಹ್ಲಿಯಂತಹ ಬ್ಯಾಟ್ಸ್‍ಮನ್ ಇಲ್ಲದ ಸಂದರ್ಭದಲ್ಲೂ ರಿಸ್ಕ್ ತೆಗೆದುಕೊಂಡು 22 ವರ್ಷದ ಉತ್ತರ ಪ್ರದೇಶದ ಚೈನಾಮನ್ ಸ್ಪಿನ್ನರ್‍ನನ್ನು ಆಯ್ಕೆ ಮಾಡಿತು. ಇದು ವಿಶ್ವ ನಂ. 1 ತಂಡದ ಧೈರ್ಯದ ನಡೆಯಾಯಿತು. ಆಯ್ಕೆ ಆಸ್ಟ್ರೇಲಿಯಕ್ಕೂ ಅಚ್ಚರಿ ತಂದಿತ್ತು. ಆಸ್ಟ್ರೇಲಿಯಾದ ಬ್ಯಾಟಿಂಗ್ ಬಲಕ್ಕೆ ಪ್ರಹಾರವಾಯಿತು.

ವಿಕೆಟ್‍ಗಳ ಕಬಳಿಕೆ : ಪದಾರ್ಪಣ ಪಂದ್ಯದಲ್ಲೇ 4 ವಿಕೆಟ್‍ಗಳನ್ನು ಮೊದಲ ಇನ್ನಿಂಗ್ಸ್‍ನಲ್ಲಿ ಉರುಳಿಸಿ ಆಸ್ಟ್ರೇಲಿಯಾಕ್ಕೆ ಮರ್ಮಾಘಾತವನ್ನೇ ಉಂಟು ಮಾಡಿದರು ಕುಲದೀಪ್. 68 ರನ್‍ಗಳಿಗೆ ನಾಲ್ಕು ವಿಕೆಟ್‍ಗಳನ್ನು ಕಿತ್ತರು.

ಚೈನಾಮನ್ ಬೌಲರ್ : ಬಲಗೈ ಎಸೆಯುವ ಲೆಗ್‍ಬ್ರೇಕ್ ಎಸೆತಗಳ ಮಿರರ್ ಇಮೇಜ್ ಚೈನಾಮನ್ ಬೌಲಿಂಗ್, ಇದನ್ನು ‘ಲೈಫ್ ಆರ್ಮ ಅನ್‍ಅರ್ಥಡಾಕ್ಸ್ ಸ್ಪಿನ್ ’ ಎಂದೂ ಹೇಳಲಾಗುವದು. ಎಡಗೈ ಸಿನ್ನರ್ ತನ್ನ ಮಣಿಕಟ್ಟನ್ನು ಬಳಸಿ ಅರ್ಥಡಾಕ್ಸ್ ಲೆಫ್ಟ್ ಆರ್ಮ್ ಸ್ಪಿನ್‍ಗೆ’ ವಿರುದ್ಧವಾಗಿ ಚೆಂಡನ್ನು ಎಸೆಯುತ್ತಾರೆ. ಸುಲಭ ವ್ಯಾಖ್ಯಾನವೆಂದರೆ ಬಲಗೈ ಬ್ಯಾಟ್ಸ್‍ಮನ್‍ಗೆ ಎಡಗೈ ಸ್ಪಿನ್ನರ್ ಬೌಲಿಂಗ್ ಮಾಡಿದ ಹಾಗೆ ತೋರುವದು. ಲೆಗ್ ಸ್ಪಿನ್ನರ್ ಎಸೆಯುವಂತ ಗೂಗ್ಲಿಗಳೂ ಕೂಡ ಚೈನಾಮನ್ ಬೌಲರ್‍ಗಳಿಂದ ಬರುವದು ವಿಶೇಷ. ಗ್ಯಾರಿ ಸೋಬರ್ಸ್, ಪ್ಲೀಟ್‍ವುಡ್, ಪೌಲ್ ಆ್ಯಡಮ್ಸ್, ಮೈಕಲ್ ಬೆವನ್, ಬ್ರಾಡ್‍ಹಾಗ್ ಈ ರೀತಿಯ ಬೌಲರ್‍ಗಳು.

ಚೈನಾಮನ್ ಹೆಸರಿನ ಉಗಮ : ‘ಚೀನಾ ಮೂಲದ ಎಡಗೈ ಸ್ಪಿನರ್‍ವೊಬ್ಬ ಮೊದಲ ಬಾರಿಗೆ ಈ ರೀತಿ ಬೌಲಿಂಗ್ ಮಾಡಿದ್ದರು. ಎಲ್ಲಿಸ್‍ಚಾಂಗ್ ಎಂದು ಅವರ ಹೆಸರು. ಎಡಗೈ ಬ್ಯಾಟ್ಸ್‍ಮನ್‍ಗೆ ಲೆಗ್‍ಸ್ಪಿನ್ ಬೌಲಿಂಗ್ ಆಗ ವಿಶೇಷ ಅನ್ನಿಸಿ ಅದೇ ಚೈನಾಮನ್ ಬೌಲಿಂಗ್ ಎಂದಾಯಿತು. ಕುಲದೀಪ್ ಭಾರತದ 288ನೇ ಟೆಸ್ಟ್ ಕ್ರಿಕೆಟರ್ ಆದರು. ಭಾರತದ ಪರ ಆಡಿದ ಮೊದಲ ಚೈನಾಮನ್ ಬೌಲರ್ ಆದರೆ, ಏಷ್ಯಾ ಉಪಖಂಡದಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿದ 2ನೇ ಚೈನಾಮನ್ ಸ್ಪಿನ್ನರ್ ಎನ್ನಿಸಿಕೊಂಡರು. ಪ್ರತಿಯೊಂದು ದೇಶÀದ ತಂಡವು ಇಂತಹ ವಿಶಿಷ್ಟ ಬೌಲರ್‍ಗಳನ್ನು ಹೊಂದಿದ್ದರೆ, ಅದು ವಿಶೇಷ.

ಭಾರತಕ್ಕೆ ಸರಣಿ ಜಯ : ಭಾರತಕ್ಕೆ ಸರಣಿ ಗೆಲ್ಲಲು ಕೊನೆಯ ಟೆಸ್ಟ್ ಪಂದ್ಯ ಬಹು ಪ್ರಾಮುಖ್ಯ ವಾಗಿತ್ತು. ಕೊಹ್ಲಿ ಇಲ್ಲದೇ ಭಾರತ ತಂಡ ನಾಯಕನಿಲ್ಲದ ನೌಕೆಯಂತಾಗಿತ್ತು. ಆದರೆ ವಾಟರ್ ಬಾಯ್ ರೂಪದಲ್ಲಿ ಕೊಹ್ಲಿ ತಂಡಕ್ಕೆ ಪ್ರೋತ್ಸಾಹಿಸಿ, ಸರಳತೆ ಮೆರೆದರು. ರಹಾನೆ ನಾಯಕತ್ವವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಂಘಟಿತ ಹೋರಾಟ ಕಂಡು ಬಂದಿತು.

ಬ್ಯಾಟಿಂಗ್ ಬಲ : ಬ್ಯಾಟಿಂಗ್‍ನಲ್ಲಿ ಕೆ. ಎಲ್. ರಾಹುಲ್, ಪೂಜಾರ, ರಹಾನೆ, ಇನ್ನಿತರರ ಆಟ ಮನ ಸೆಳೆಯಿತು. ಜಡೇಜಾ ಆಲ್‍ರೌಂಡ್ ಆಟ ಅದ್ಭುತ ಎನ್ನಿಸಿತು. ಕೆ ಎಲ್ ರಾಹುಲ್, ಪೂಜಾರ ಸರಣಿ ತುಂಬಾ ಬ್ಯಾಟಿಂಗ್ ಬಲವಾದರು. ವಿಕೆಟ್ ಕೀಪರ್ ಸಹಾ ಕೂಡ ಬ್ಯಾಟಿಂಗ್, ಕೀಪಿಂಗ್‍ನಲ್ಲಿ ಮಿಂಚಿದರು. ಕೊಹ್ಲಿ ಮಾತ್ರ ತನ್ನ ಲಯ ಕಂಡುಕೊಳ್ಳಲಿಲ್ಲ.

ಬೌಲಿಂಗ್ ಕರಾಮತ್ತು : ಭಾರತ ಬೌಲಿಂಗ್‍ನಲ್ಲಿ ಆಸ್ಟ್ರೇಲಿಯಾದಂತಹ ಬಲಾಢ್ಯ ತಂಡವನ್ನು ನಡುಗಿಸಿಬಿಟ್ಟಿದೆ. ಉಮೇಶ್ ಯಾದವ್‍ನ ಬೆಂಕಿಯ ಉಂಡೆಗಳಿಗೆ ಆಸ್ಟ್ರೇಲಿಯಾದ ಘಟಾನುಘಟಿ ಬ್ಯಾಟ್ಸ್‍ಮನ್‍ಗಳು ತತ್ತರಿಸಿ ಹೋದರು. ಮತ್ತೆ ಇಶಾಂತ್‍ಶರ್ಮಾ, ಭುವನೇಶ್ವರ್ ಕೂಡ ಉತ್ತಮ ಪ್ರದರ್ಶನ ನೀಡಿದರು. ವೇಗದ ಬೌಲಿಂಗ್‍ನಲ್ಲಿ ಭಾರತ ಪ್ರಬುದ್ಧವಾಗುತ್ತಿರುವದು ನಿಜಕ್ಕೂ ಸಂತೋಷದ ವಿಷಯ. ಇನ್ನು ಸ್ಪಿನ್ನರ್‍ಗಳಲ್ಲಿ ಜಡೇಜಾ ಹಾಗೂ ಅಶ್ವಿನ್ ಸಾಧನೆ ಅದ್ಭುತ, ಅಂತೇ ಕೊನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಪ್ರವೇಶ ಪಂದ್ಯದ ಸಾಧನೆ ಕೂಡ ಗಮನೀಯ.

ಅಶ್ವಿನ್ ವಿಶ್ವ ದಾಖಲೆ : ಸ್ಮಿತ್ ವಿಕೆಟ್ ಉರುಳಿಸಿದ ಸಂದರ್ಭ ಟೆಸ್ಟ್ ಕ್ರಿಕೆಟ್‍ನ ಒಂದೇ ಋತುವಿನಲ್ಲಿ ಗರಿಷ್ಠ 79 ವಿಕೆಟ್ ಉರುಳಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ದ. ಆಫ್ರಿಕಾದ ಡೆಲ್‍ಸ್ಟ್ಯೆನ್ 2007ರಲ್ಲಿ 78 ವಿಕೆಟ್ ಉರುಳಿಸಿದ್ದರು. ಭಾರತ ಆಸ್ಟ್ರೇಲಿಯಾ ವಿರುದ್ಧದ ಸರಣಿ ಜಯ ಅತ್ಯಂತ ಮಹತ್ವದ್ದು, ಧರ್ಮ ಶಾಲಾ ಪಂದ್ಯವಂತೂ ಅತ್ಯಂತ ಪ್ರಾಮುಖ್ಯತೆ ಪಡೆದು ಪ್ರವಾಸಿಗರನ್ನು ಸೋಲಿಸಿ ಸರಣಿ ಗೆಲ್ಲಲು ಸಾಧ್ಯವಾಯಿತು. ಆ ಟೆಸ್ಟ್‍ಗಳ ಸರಣಿಯಲ್ಲಿ 2-1 ರಿಂದ ಭಾರತ ಸರಣಿ ಜಯ ಸಾಧಿಸಿ, ಯುಗಾದಿ ಹಬ್ಬಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿತು.