ಸೋಮವಾರಪೇಟೆ, ಮಾ.29: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಯುವ ಒಕ್ಕೂಟದ ಕಚೇರಿಯಲ್ಲಿ ಶಾಹಿದಿ ದಿನ ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಭಗತ್‍ಸಿಂಗ್ ಸೇನೆಯ ಸಂಚಾಲಕ ಬಸವನಕೊಪ್ಪ ದಯಾನಂದ್, ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಮಂದಿ ಪ್ರಾಣತ್ಯಾಗ ಮಾಡಿದ್ದು, ಅವರುಗಳ ಸ್ಮರಣೆಯಾಗಬೇಕು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೈಗೂಡಿಸುವ ಕಾರ್ಯವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಯಡೂರು ರವಿ ವಹಿಸಿದ್ದರು. ವೇದಿಕೆಯಲ್ಲಿ ಯುವ ಒಕ್ಕೂಟ ಮಾಜೀ ಅಧ್ಯಕ್ಷ ದಿವಾಕರ್, ಅಯ್ಯಪ್ಪ, ಪ್ರಮುಖರಾದ ರಮೇಶ್, ಸಂತೋಷ್ ಅವರುಗಳು ಉಪಸ್ಥಿತರಿದ್ದರು.