ಮಡಿಕೇರಿ/ವೀರಾಜಪೇಟೆ, ಮಾ. 29: ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಅಕ್ರಮವಾಗಿ ನಕಲಿ ಲಾಟರಿ ಮಾರಾಟದ ದಂಧೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಇದೀಗ ಸಿಬಿಐ ತನಿಖೆ ನಡೆಯುತ್ತಿದೆ. ಸಿಬಿಐ ತಂಡದ ಇನ್ಸ್‍ಪೆಕ್ಟರ್ ಓರ್ವರ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ತನಿಖಾ ತಂಡ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಲಾಟರಿ ಮಾರಾಟ ದಂಧೆಯ ಆರೋಪದಲ್ಲಿ ಪ್ರಕರಣಕ್ಕೆ ಒಳಗಾಗಿರುವವರನ್ನು ತನಿಖೆಗೆ ಒಳಪಡಿಸಿ ಮರು ವಿಚಾರಣೆ ನಡೆಸುತ್ತಿದೆ.ತಮಿಳು ನಾಡು ಮೂಲಕ ಮಾರ್ಟಿನ್ ಎಂಬಾತ ಅಕ್ರಮ ಲಾಟರಿ ವಹಿವಾಟಿನ ಮುಖ್ಯ ‘ಕಿಂಗ್‍ಪಿನ್’ ಆಗಿದ್ದು, ರಾಜ್ಯದಲ್ಲಿ ಕೋಲಾರ ಮೂಲದ ಪಾರಿಜಾರನ್ ಎಂಬಾತ ಈ ದಂಧೆ ನಡೆಸುತ್ತಿದ್ದ. ಈ ಆರೋಪದಡಿಯಲ್ಲಿ ಪಾರಿರಾಜನ್ ಬಂಧಿತನಾಗಿದ್ದು, ಈತನ ವಿಚಾರಣೆ ಸಂದರ್ಭ ಹಲವಾರು ಸ್ಪೋಟಕ ಮಾಹಿತಿಗಳು ಹೊಬಿದ್ದಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳ ಕೃಪಾಕಟಾಕ್ಷ ಈ ವ್ಯಕ್ತಿಗೆ ಇತ್ತು ಎನ್ನುವ ಅಂಶದೊಂದಿಗೆ ಈ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆಡೆಯಾಗಿತ್ತಲ್ಲದೆ, ಸದನದಲ್ಲೂ ಪ್ರತಿಧ್ವನಿಸಿತ್ತು.
ಇದೇ ಆರೋಪದಂತೆ ಲಾಟರಿ ವಿಚಕ್ಷಣಾದಳದ ಎಡಿಜಿಪಿಯಾಗಿದ್ದ ಅಲೋಕ್ ಕುಮಾರ್ ಅವರು ಅಮಾನತಿಗೆ ಒಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಸರಕಾರ ಆರಂಭದಲ್ಲಿ ಇದರ ತನಿಖೆಯನ್ನು ಸಿಓಡಿಗೆ ವಹಿಸಿತ್ತಾದರೂ ಅಂತರರಾಜ್ಯದ ವಿಚಾರವಿದ್ದ ಕಾರಣದಿಂದಾಗಿ ಸಿಬಿಐ ತನಿಖೆಗೆ ನೀಡಲಾಗಿತ್ತು. ಪ್ರಕರಣದ ತನಿಖೆ ಇನ್ನೂ ಕಾರ್ಯರೂಪದಲ್ಲಿದ್ದು, ಸಿಬಿಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಕೊಡಗು ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಲಾಟರಿ ಮಾರಾಟದ ಆರೋಪದಂತೆ ಕೆಲವು ಪ್ರಕರಣ ದಾಖಲಾಗಿದ್ದು, ಹಲವರು ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಸಿಬಿಐ ಇನ್ಸ್‍ಪೆಕ್ಟರ್ ಕುಲ್‍ದೀಪ್ ಸಿಂಗ್ ನೇತೃತ್ವದಲ್ಲಿ ಆಗಮಿಸಿರುವ ಸಿಬಿಐ ತಂಡ ಈ ಬಗ್ಗೆ ಆಯಾ ಠಾಣೆಯಿಂದ ಮಾಹಿತಿ ಕಲೆ ಹಾಕುತ್ತಿದೆ. ಮಾತ್ರವಲ್ಲದೆ ಪ್ರಕರಣಕ್ಕೆ ಒಳಗಾಗಿರುವವರನ್ನು ಅಜ್ಞಾತ ಸ್ಥಳಕ್ಕೆ ಕರೆಯಿಸಿ ತೀವ್ರ ವಿಚಾರಣೆಗೆ ಒಳಪಡಿಸುತ್ತಿರುವದಾಗಿ ತಿಳಿದು ಬಂದಿದೆ.
ಕೇಂದ್ರದ ಸಿಬಿಐನ ವಿಶೇಷ ತಂಡ ಕೊಡಗಿನ ಅಕ್ರಮ ಲಾಟರಿ ಪ್ರಕರಣದಲ್ಲಿ ಪೊಲೀಸ್ ಮೊಕದ್ದಮೆ ದಾಖಲಾಗಿದ್ದ 21 ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆಯನ್ನು ಪಡೆದಿರುವದಾಗಿ ಹೇಳಲಾಗಿದೆ.
ವೀರಾಜಪೇಟೆಯಲ್ಲಿ 3 ಮಂದಿ, ಮಡಿಕೇರಿಯಲ್ಲಿ 3, ಸಿದ್ದಾಪುರದಲ್ಲಿ 11, ಹಾಗೂ ಗೋಣಿಕೊಪ್ಪದ 4 ಮಂದಿಯನ್ನು ಸಿಬಿಐ ತಂಡ ವಿಚಾರಣೆಗೊಳಪಡಿಸಿದೆ ಎನ್ನಲಾಗಿದೆ.