ಗೋಣಿಕೊಪ್ಪ, ಮಾ. 29: ಕಾವೇರಿ ಕಾಲೇಜು ಮೈದಾನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಾವೇರಿ ಕಾಲೇಜು ಸಹಭಾಗಿತ್ವದಲ್ಲಿ ಅಂತರ ಕಾಲೇಜು ಕೊಡಗು ವಲಯ ಮಟ್ಟದ ಮೊಟ್ಟ ಮೊದಲ ಮಹಿಳಾ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟದಲ್ಲಿ ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜು, ಸೋಮವಾರಪೇಟೆ ಸೆಂಟ್ ಜೋಸೆಫ್ ಕಾಲೇಜು, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಕಾವೇರಿ ಕಾಲೇಜು, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಹಾಗೂ ಅತಿಥೇಯ ಗೋಣಿಕೊಪ್ಪ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು.

ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜನ್ನು 3–1 ಅಂತರದಿಂದ ಪರಾಭವಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಾವೇರಿ ಕಾಲೇಜು ತಂಡದ ಪರ ಸುಪ್ರಿಯ 2 ಗೋಲುಗಳಿಸಿ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರೆ, ಕವನ 1 ಗೋಲು ಬಾರಿಸಿದರು . ಶನಿವಾರಸಂತೆ ಪರ ನವ್ಯ 1 ಗೋಲು ದಾಖಲಿಸಿದರು.

ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಶನಿವಾರಸಂತೆ ಕಾಲೇಜು, ಸೆಂಟ್ ಜೋಸೆಫ್ ಸೋಮವಾರಪೇಟೆ ತಂಡವನ್ನು 19- 6 ಅಂಕಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು, ಸೆಂಟ್ ಜೋಸೆಫ್ ರನ್ನರ್ ಸ್ಥಾನ ಪಡೆಯಿತು. ವಿಜೇತ ತಂಡದ ಆಟಗಾರ್ತಿ ಪೂಜ ಉತ್ತಮ ಆಟಗಾರ್ತಿ ಬಹುಮಾನ ಪಡೆದುಕೊಂಡರು.

ವಾಲಿಬಾಲ್ ಪಂದಾವಳಿಯಲ್ಲಿ ಸೋಮವಾರಪೇಟೆ ಸೆಂಟ್ ಜೋಸೆಫ್ ತಂಡ, ವೀರಾಜಪೇಟೆ ಕಾವೇರಿ ಕಾಲೇಜು ತಂಡವನ್ನು 12-15, 15–13, 15 – 12 ಅಂಕಗಳಿಂದ ಮಣಿಸುವ ಮೂಲಕ ಪ್ರಶಸ್ತಿ ಪಡೆಯಿತು. ಕಾವೇರಿ ಕಾಲೇಜು ರನ್ನರ್ ಸ್ಥಾನ ಪಡೆಯಿತು. ವಿಜೇತ ತಂಡದ ಟೀನಾ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.

ಥ್ರೋಬಾಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ವೀರಾಜಪೇಟೆ ಕಾವೇರಿ ಕಾಲೇಜು ತಂಡವನ್ನು 15–10, 15–13 ನೇರ ಸೆಟ್‍ನಿಂದ ಸೋಲಿಸಿ ಜಯದ ನಗೆ ಬೀರಿತು. ವೀರಾಜಪೇಟೆ ಕಾವೇರಿ ಕಾಲೇಜು ದಿಟ್ಟ ಹೋರಾಟ ನೀಡಿದರೂ ರನ್ನರ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ರನ್ನರ್ ತಂಡದ ನಿಶಾ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡರು.

ದೈಹಿಕ ಶಿಕ್ಷಣ ನಿದೆರ್Éೀಶಕರಾದ ನೆರವಂಡ ಡಾ. ದೇಚಮ್ಮ, ಮಲ್ಲಮಾಡ ಸಂತೋಷ್ ಹಾಗೂ ಕ್ರೀಡಾ ವಿದ್ಯಾರ್ಥಿಗಳು ಪಂದ್ಯಾವಳಿ ಆಯೋಜಿಸಿದ್ದರು. ಈ ಸಂದರ್ಭ ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ, ಪಳಂಗಂಡ ವಾಣಿ ಚಂಗಪ್ಪ, ಕೊಳ್ಳಿಮಾಡ ರಶ್ಮಿ ಅಯ್ಯಪ್ಪ, ಕುಪ್ಪಂಡ ಇಂದಿರಾ ಸುಬ್ಬಯ್ಯ, ಮಂಗಳೂರು ವಿಶ್ವವಿದ್ಯಾನಿಲಯ ಸಹಾಯಕ ನಿರ್ದೇಶಕ ಡಾ. ಪ್ರಸನ್ನ, ಕ್ರೀಡಾ ಕಾರ್ಯದರ್ಶಿ ಚಲನ್ ಶನಿವಾರಸಂತೆ ಕಾಲೇಜು ಪ್ರಾಂಶುಪಾಲ ಉಮಾಶಂಕರ್, ಚೆಲುವ ಉಪಸ್ಥಿತರಿದ್ದರು. ಕಾವೇರಿ ವಿದ್ಯಾಸಂಸ್ಥೆಯ ನಿದೆರ್Éೀಶಕ ಕುಲ್ಲಚಂಡ ಬೋಪಣ್ಣ ಹಾಗೂ ಕೊಡಗು ಫ್ಲೋರ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಮಿನ್ನಂಡ ಜೋಯಪ್ಪ ಬಹುಮಾನ ವಿತರಿಸಿದರು.

ಮೂಕಚಂಡ ನಾಚಪ್ಪ, ಚಿರಿಯಪಂಡ ಸುಬ್ಬಯ್ಯ, ರಾಜಾ ರೈ, ವಾಟೇರಿರ ಮೊಣ್ಣಪ್ಪ ಹಾಗೂ ಬೇಪಡಿಯಂಡ ಪೂವಣ್ಣ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರೆ, ಅಜ್ಜಮಾಡ ಪೊನ್ನಪ್ಪ ಹಾಗೂ ಚನ್ನನಾಯಕ್ ವೀಕ್ಷಕ ವಿವರಣೆ ನೀಡಿದರು.