ಸೋಮವಾರಪೇಟೆ, ಮಾ. 29: ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಗೌಡಳ್ಳಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಕಪ್’ ಮುಕ್ತ ಫುಟ್ಬಾಲ್ ಪಂದ್ಯಾಟದಲ್ಲಿ ವಿದೇಶಿ ಆಟಗಾರರು ಭಾಗವಹಿಸಿದ್ದು, ಎಲ್ಲರ ಗಮನ ಸೆಳೆದರು.ಗೌಡಳ್ಳಿ ಶಾಲಾ ಮೈದಾನದಲ್ಲಿ ಕಾಫಿ ಬೆಳೆಗಾರರ ಜಿ.ಪಿ. ಸುದರ್ಶನ್, ಜಿ.ಎಸ್. ಪ್ರಸನ್ನ, ಶುಂಠಿ ಸುರೇಶ್, ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಎಸ್.ಎನ್. ಪೃಥ್ವಿ ಅವರುಗಳು ಪಂದ್ಯಾಟಕ್ಕೆ ಚಾಲನೆ ನೀಡಿದರು.

ಸೋಮವಾರಪೇಟೆ ಡಾಲ್ಫೀನ್ಸ್ ತಂಡದಲ್ಲಿ 6 ಮಂದಿ ವಿದೇಶಿ ಆಟಗಾರರು ಭಾಗವಹಿಸಿದ್ದು, ಅದ್ಭುತ ಆಟದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಐವರಿ ಕೋಸ್ಟ್‍ನ ಆಲ್ಪಾ, ಎರಿಕ್, ಜಾರ್‍ನಿ, ಢ್ರಾನಿಕ್ಸ್, ಲ್ಯಾಂಡ್ರಿ, ಬೋವ್ಹಾ, ಅಬೂಬಕರ್, ನಾಫಟಿ, ತನ್ಮು, ಆದ್ಯುತ್ ಅವರುಗಳ ಮಿಂಚಿನ ಆಟದಿಂದ ಕ್ರೀಡಾಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು.

ಪಂದ್ಯಾಟದಲ್ಲಿ 16 ತಂಡಗಳು ಭಾಗವಹಿಸಿದ್ದು ಹೊರ ರಾಜ್ಯದ ಆಟಗಾರರೂ ಇದ್ದಾರೆ. ಶಾಂತವೇರಿ ಫುಟ್ಬಾಲ್ ತಂಡದಲ್ಲಿ ಕೇರಳದ ಆಟಗಾರರಿದ್ದು, ಟೌನ್ ಟೀಮ್ ಶನಿವಾರಸಂತೆಯಲ್ಲಿ ಸುರತ್ಕಲ್ ಆಟಗಾರರು ಭಾಗವಹಿಸಿದ್ದಾರೆ.

ಪ್ರಥಮ ಬಹುಮಾನವಾಗಿ ರೂ. 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯೊಂದಿಗೆ ವೈಯಕ್ತಿಕ ವಿಭಾಗದಲ್ಲೂ ಬಹುಮಾನಗಳಿವೆ.

ಕೇರಳದ ಟೌನ್‍ಟೀಮ್, ಕಾಫಿ ಲ್ಯಾಂಡ್ ಚಿಕ್ಕಮಗಳೂರು, ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಸೋಮವಾರಪೇಟೆ, ಒಕ್ಕಲಿಗರ ಯುವವೇದಿಕೆ ಸೋಮವಾರಪೇಟೆ, ಸಾಂತ್ವೇರಿ ಸ್ಪೋಟ್ರ್ಸ್ ಕ್ಲಬ್, ಫ್ರೆಂಡ್ಸ್ ಫುಟ್‍ಬಾಲ್ ಕ್ಲಬ್ ಗೌಡಳ್ಳಿ, ಭಜರಂಗದಳ ಶುಂಠಿ, ಮಿಲನ್ ಫ್ರೆಂಡ್ಸ್ ಅಮ್ಮತಿ ತಂಡ ಕ್ವಾಟರ್ ಫೈನಲ್ ಹಂತಕ್ಕೆ ತಲುಪಿವೆ.

ಬೆಳಿಗ್ಗೆ ನಡೆದ ಉದ್ಘಾಟನಾ ಪಂದ್ಯಾಟದಲ್ಲಿ ಭಜರಂಗದಳ ಶುಂಠಿ ತಂಡ, ಬೆಂಗಳೂರಿನ ಪಿ.ವಿ.ರಾಮನ್ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು. ಅಮ್ಮತಿ ಮಿಲನ್ ಬಾಯ್ಸ್ ತಂಡ, ಚಾಮೇರ ತಂಡವನ್ನು 4-0 ಗೋಲುಗಳಿಂದ ಮಣಿಸಿತು. ಸಾಂತ್ವೇರಿ ಫ್ರೆಂಡ್ಸ್ ತಂಡ, ಕೊರ್ಲಳ್ಳಿ ಫುಟ್ಬಾಲ್ ತಂಡದ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಗೆಲುವು ಕಂಡಿತು. ಸೋಮವಾರಪೇಟೆ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ತಂಡ ಐಗೂರ್ ಎಫ್ ಸಿ ತಂಡದ ವಿರುದ್ಧ 5-0 ಅಂತರದಲ್ಲಿ ಗೆಲುವಿನ ನಗೆ ಬೀರಿದು.

ತೀರ್ಪುಗಾರರಾಗಿ ರಾಮ್‍ಸಿಂಗ್, ಭದ್ರಿನಾಥ್, ನಾಗೇಂದ್ರಸಿಂಗ್, ಗೋಪಾಲ್, ಉದಯಕುಮಾರ್, ಪ್ರವೀಣ್ ಗೌಡಳ್ಳಿ ಕಾರ್ಯನಿರ್ವಹಿಸಿದರು.