ಸೋಮವಾರಪೇಟೆ, ಮಾ. 29: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇವರ ವತಿಯಿಂದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ತಹಶೀಲ್ದಾರ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ನಡೆಯಿತು.

ಏ. 2 ರಂದು ನಡೆಯುವ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ವಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈ ಜೋಡಿಸಬೇಕು ಎಂದು ತಹಶೀಲ್ದಾರ್ ಕೃಷ್ಣ ಮನವಿ ಮಾಡಿದರು.

2017-18ನೇ ಸಾಲಿನ ಮೊದಲ ಸುತ್ತಿನ ಪಲ್ಸ್ ಪೊಲೀಯೋ ಕಾರ್ಯ ಕ್ರಮದಲ್ಲಿ ತಾಲೂಕಿನಲ್ಲಿ 14,384 ಮಕ್ಕಳಿಗೆ ಲಸಿಕೆ ನೀಡಲು ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ ಹೇಳಿದರು.

ತಾಲೂಕಿನ ಸೋಮವಾರಪೇಟೆ, ಕೊಡ್ಲಿಪೇಟೆ, ಕುಶಾಲನಗರ ಬಸ್ ನಿಲ್ದಾಣಗಳು, ನಿಸರ್ಗಧಾಮ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಐದು ಕಡೆ ಸಂಚಾರಿ ಲಸಿಕಾ ಕೇಂದ್ರ ಗಳನ್ನು ಸ್ಥಾಪಿಸಲಾಗಿದೆ. ತಾಲೂಕಿನಲ್ಲಿ ಒಂದು ಮೊಬೈಲ್ ಬೂತ್ ಕಾರ್ಯ ನಿರ್ವಹಿಸಲಿದೆ ಎಂದು ಆರೋಗ್ಯಾಧಿ ಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಬಿಇಓ ಮಲ್ಲೇಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ, ಶಿಶು ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಶೈಲಾ, ಶಿಕ್ಷಣ ಇಲಾಖೆಯ ರಾಮಚಂದ್ರ ಮೂರ್ತಿ, ತಾಲೂಕು ಹಿರಿಯ ಆರೋಗ್ಯ ಸಹಾಯಕಿ ದಮಯಂತಿ, ಆರೋಗ್ಯ ನಿರೀಕ್ಷಕ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.