ಗೋಣಿಕೊಪ್ಪಲು, ಮಾ. 29: ನಿವೇಶನ ರಹಿತ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಎಪ್ರಿಲ್ 3 ರಂದು ತಾಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಆದಿವಾಸಿ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್ ಮಾಯಮುಡಿ ತಿಳಿಸಿದ್ದಾರೆ.
ದಿಡ್ಡಳ್ಳಿಯಲ್ಲಿ ನಿವೇಶನ ನೀಡಬೇಕು ಎಂದು ನಾವು ಒತ್ತಾಯಿಸುತ್ತಿಲ್ಲ. ಜಿಲ್ಲೆಯ ಯಾವದೇ ಜಾಗದಲ್ಲಿ ಅವರಿಗೆ ವಸತಿ ಕಲ್ಪಿಸಲು ಜಾಗ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನಿವೇಶನ ರಹಿತ 150 ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿಗೆ ಜಾಗ ನೀಡಬೇಕು ಎಂದು 2 ವರ್ಷಗಳಿಂದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಯಾಯ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಒದಗಿಸಲು ಸರ್ಕಾರದ ಆದೇಶವಿದೆ. ಜಿಲ್ಲೆಯಲ್ಲಿ ಸರ್ಕಾರಿ ದಾಖಲಾತಿ ಪ್ರಕಾರ ಸಾಕಷ್ಟು ಸರ್ಕಾರಿ ಭೂಮಿ ಹಾಗೂ ಗೋಮಾಳವಿದೆ ಕೆಲವೆಡೆ ಪ್ರಬಲರಿಂದ ಇದು ಒತ್ತುವರಿಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ತನಿಖೆ ಕೈಗೊಂಡು ನಿವೇಶನ ರಹಿತರಿಗೆ ಹಂಚಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಆದಿವಾಸಿ ಮಹಾಸಭಾದ ಸದಸ್ಯ ಪಿ.ಕೆ. ಸುಬ್ಬ, ಮುತ್ತ, ರೂಪ ಹಾಗೂ ಸರಿತಾ ಇದ್ದರು.