ಕೂಡಿಗೆ, ಮಾ. 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದಲ್ಲಿನ ಆನೆಕೆರೆ ಹೂಳು ತೆಗೆಯುವ ಕಾಮಗಾರಿ ಯನ್ನು ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು.
ಜಿ.ಪಂ. ವತಿಯಿಂದ ರೂ. 2.63 ಲಕ್ಷ ವೆಚ್ಚದಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾಮಗಾರಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರಿನ ಮೇರೆ ಕೂಡ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಯೋಜನಾ ಪ್ರಕಾರ ಕೆರೆ ಹೊಳು ತೆಗೆಯುವ ಕಾಮಗಾರಿ ನಡೆಯುತ್ತಿಲ್ಲ. ಯೋಜನಾ ಪ್ರಕಾರವೇ ಕಾಮಗಾರಿ ಕೈಗೊಳ್ಳಬೇಕು. ಇದರ ಉಸ್ತುವಾರಿಯನ್ನು ಸಹಾಯಕ ಅಭಿಯಂತರರು ಸರಿಯಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ಕೆರೆಯಲ್ಲಿರುವ ಫಲವತ್ತದ ಗೋಡು ಮಣ್ಣು ಅನ್ನು ತೆಗೆದುಕೊಂಡು ಹೋಗಲು ರೈತರಿಗೆ ಮುಕ್ತ ಅವಕಾಶ ನೀಡಬೇಕು. ರೈತರು ತಮ್ಮ ಜಮೀನಿಗೆ ಈ ಮಣ್ಣು ಹಾಕುವದರಿಂದ ಜಮೀನಿನ ಫಲವತ್ತತೆ ಹೆಚ್ಚುತ್ತದೆ. ಕೆರೆ ಹೂಳು ತೆಗೆಯಲು ಸರ್ಕಾರ ಹಣವನ್ನು ಪೋಲು ಮಾಡುವ ಬದಲು ರೈತರೆ ಕೆರೆ ಗೋಡು ಮಣ್ಣು ತೆಗೆದುಕೊಂಡು ಹೋಗಲು ಅವಕಾಶ ನೀಡಿದರೆ ಕೆರೆ ಹೂಳು ಅವರೇ ತೆಗೆಯುತ್ತಾರೆ. ಇಲ್ಲಿಗೆ ಹಾಕುವ ಅನುದಾನವನ್ನು ಕೂಡಿಗೆ ಸರ್ಕಾರಿ ಕಾಲೇಜಿಗೆ ಶೌಚಾಲಯವನ್ನು ನಿರ್ಮಾಣಕ್ಕೆ ವಿನಿಯೋಗಿಸುವದು ಸೂಕ್ತ ಎಂದು ಸಲಹೆ ನೀಡಿದರು. ಸಹಾಯಕ ಅಭಿಯಂತರ ಕೀರ್ತನ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಭಾಸ್ಕರ್ ನಾಯಕ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಿ.ಆರ್. ಪುಷ್ಪಲತಾ, ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಎಪಿಎಂಸಿ ಮಾಜಿ ನಿರ್ದೇಶಕ ಎಂ.ವಿ. ಹರೀಶ್, ಕೂಡುಮಂಗಳುರು ಗ್ರಾ.ಪಂ. ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಚಂದ್ರು ಮತ್ತಿತರರು ಹಾಜರಿದ್ದರು.