ಗೋಣಿಕೊಪ್ಪಲು, ಮಾ. 29: 40 ವರ್ಷ ಮೀರಿದ ನಂತರ ಪ್ರತಿಯೊಬ್ಬರು ಮೆಮೋಗ್ರಫಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯ ಸ್ಥಿತಿ ತಿಳಿದುಕೊಳ್ಳಬೇಕು ಎಂದು ಕ್ಯಾನ್ಸರ್ ತಜ್ಞ ಡಾ|| ಮಾಪಂಗಡ ಬೆಳ್ಯಪ್ಪ ಸಲಹೆ ನೀಡಿದರು.
ಕೊಟ್ಟಗೇರಿ ಸಮುದಾಯ ಭವನ ಎದುರು ಕಾವೇರಿ ಕೊಡವ ಪೊಮ್ಮಕ್ಕಡ ಕೂಟದ 10ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಇಂತಹ ಪರೀಕ್ಷೆಗಳು ಆರೋಗ್ಯ ಕಾಳಜಿ ಹೆಚ್ಚಾಗಿಸುತ್ತದೆ. ದೇಹದಲ್ಲಿ ಸಮಸ್ಯೆಗಳು ಇದ್ದರೆ ತಿಳಿಯುತ್ತದೆ. ಮಹಿಳೆಯರಿಗೆ ಕಾಡುವ ಕ್ಯಾನ್ಸರ್ ರೋಗಗಳು ಇದರಿಂದ ತಿಳಿಯುತ್ತಿದೆ ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಮಹಿಳಾ ಸಂಘಗಳು ಸಾರ್ವಜನಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಕಾಣಿಕೆ ನೀಡಬೇಕು ಎಂದರು.
ಭತ್ತದ ಗದ್ದೆ ಪುನಶ್ಚೇತನಕ್ಕೆ ರೈತರಿಗೆ ಸಹಾಯ ಧನ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಜಮ್ಮಾ ಸಮಸ್ಯೆಯ ಬಗ್ಗೆ ಕಂದಾಯ ಸಚಿವರ ಗಮನ ಸೆಳೆದಿದ್ದು ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಜಿ.ಪಂ. ಸದಸ್ಯ ಬಾನಂಡ ಪೃತ್ಯು ಮಾತನಾಡಿ, ಕೊಡಗಿನ ಆಚಾರ, ವಿಚಾರವನ್ನು ಉಳಿಸುವ ಕೆಲಸಗಳು ಮಹಿಳೆಯರಿಂದ ಮಾತ್ರ ಸಾಧ್ಯ. ತಮ್ಮ ಮಕ್ಕಳಿಗೆ ಬಾಲ್ಯದಿಂದಲ್ಲೇ ಕೊಡವ ಸಂಸ್ಕøತಿಯ ಬಗ್ಗೆ ತಿಳಿಸುವ ಮೂಲಕ ಸಂಸ್ಕøತಿ ಉಳಿಸಬೇಕೆಂದರು.
ಈ ಸಂದರ್ಭ 33 ವರ್ಷ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಕಳ್ಳಿಚಂಡ ಸರಳಾ ಅವರನ್ನು ಸನ್ಮಾನಿಸಲಾಯಿತು. ಹುದಿಕೇರಿ ಮಹಾದೇವ ಯುವಕ ಸಂಘದಿಂದ ಕೊಡವ ಕಲಾ ಪ್ರಕಾರಗಳಾದ ಕತ್ತಿಯಾಟ್, ಉಮ್ಮತಾಟ್, ಕೋಲಾಟ್ ನೃತ್ಯಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಕಾವೇರಿ ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮಚ್ಚಮಾಡ ಲಲ್ಲೂ ಮಾಚಯ್ಯ, ಆರ್‍ಎಂಸಿ ಸದಸ್ಯ ಮಾಚಂಗಡ ಸುಜಾ ಪೂಣಚ್ಚ, ನಿಟ್ಟೂರು ಗ್ರಾ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪೋರಂಗಡ ಪವನ್ ಚಿಟ್ಟಿಯಪ್ಪ, ಕಾಫಿ ಬೆಳೆಗಾರ ಮಾಚಂಗಡ ಅಶೋಕ್ ಉಪಸ್ಥಿತರಿದ್ದರು.