ಬೆಂಗಳೂರು, ಮಾ. 29: ವೀರಾಜಪೇಟೆ ತಾಲೂಕು ಆರ್ಜಿ ಗ್ರಾಮದಲ್ಲಿ ಸುಮಾರು 86 ಎಕರೆ ಗೋಮಾಳ ಜಾಗ ಕಾಯ್ದಿರಿಸಲಾಗಿದೆ. ಈ ಗೋಮಾಳದಲ್ಲಿ ಅನೇಕರು ಒತ್ತುವರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಗೋಮಾಳ ರಕ್ಷಣಾ ಸಮಿತಿಯ ಸುಬ್ಬಯ್ಯ ಎಂಬವರು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಈ ಹಿಂದೆ ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು 2016ರ ಜೂನ್ 21ರಂದು ಆದೇಶವೊಂದನ್ನು ಹೊರಡಿಸಿತ್ತು. ನ್ಯಾಯಾಧೀಶ ಅಶೋಕ್ ಬಿ. ಇಂಟಿಗಿರಿ ಅವರು ನೀಡಿದ್ದ ಆದೇಶದಲ್ಲಿ ಗೋಮಾಳ ಪ್ರದೇಶವನ್ನು ಜಾನುವಾರುಗಳ ಮೇವಿಗಾಗಿ ಮಾತ್ರ ಬಳಸಲು ಸೂಚಿಸಲಾಗಿತ್ತು. ಜಾಗವನ್ನು ಒತ್ತುವರಿ ಮಾಡದಂತೆಯೂ ನಿರ್ಬಂಧಿಸಿತ್ತು. ಅಲ್ಲದೆ 3 ತಿಂಗಳೊಳಗೆ ಈ ಕುರಿತು ನ್ಯಾಯಾಲಯಕ್ಕೆ ವಿವರ ವರದಿ ಸಲ್ಲಿಸುವಂತೆಯೂ ಸೂಚಿಸಿತ್ತು. ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ನ್ಯಾಯಾಲಯವು ನೀಡಿದ್ದ ನಿರ್ದೇಶನದಲ್ಲಿ, ಗೋಮಾಳದಲ್ಲಿ ನೆಲೆಸಿರುವ ದನಗಳ ಸಂಖ್ಯೆ, ಒತ್ತುವರಿಯಾಗಿರುವ ಪ್ರಮಾಣ ಇತ್ಯಾದಿ ಬಗ್ಗೆ ವಿವರ ನೀಡುವಂತೆಯೂ ಸೂಚಿಸಲಾಗಿತ್ತು.

(ಮೊದಲ ಪುಟದಿಂದ) ಆದರೆ ಈ ಯಾವದರ ಕುರಿತು ಜಿಲ್ಲಾಧಿಕಾರಿಯವರು ಸ್ಪಂದಿಸದೆ ಮೌನ ವಹಿಸಿದ ಹಿನ್ನೆಲೆ, ಅರ್ಜಿದಾರ ಸುಬ್ಬಯ್ಯ ಅವರು ನಿನ್ನೆದಿನ ತಮ್ಮ ವಕೀಲರಾದ ಪವನ್ ಚಂದ್ರ ಶೆಟ್ಟಿ ಅವರ ಮೂಲಕ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಅರ್ಜಿದಾರರು ಆರೋಪಿಸಿದ್ದರು. ಇದನ್ನು ಪರಿಗಣಿಸಿದ ವಿಭಾಗೀಯ ಪೀಠದ ನ್ಯಾಯಾಧೀಶರುಗಳಾದ ಅಶೋಕ್ ಬಿ. ಇಂಟಿಗಿರಿ ಹಾಗೂ ಶ್ರೀಮತಿ ಮುದುಗಲ್ ಇವರುಗಳು ಜಿಲ್ಲಾಧಿಕಾರಿಯವರು ಮುಂದಿನ ಹದಿನೈದು ದಿನಗಳ ಒಳಗೆ ನ್ಯಾಯಾಲಯಕ್ಕೆ ಹಾಜರಾಗಿ ಅಭಿಪ್ರಾಯ ತಿಳಿಸುವಂತೆ ಆದೇಶಿಸಿದ್ದಾರೆ.