ಶನಿವಾರಸಂತೆ, ಮಾ. 29: ಕೊಡ್ಲಿಪೇಟೆ ಹೋಬಳಿಯ ಮಾಗಡಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕರಿಮೆಣಸು ಫಸಲನ್ನು ಕಾವಲು ಕಾಯಲು ನೇಮಿಸಿದ್ದ ನಾಲ್ವರು ಕಾವಲುಗಾರರೇ ರಾತ್ರಿ ಸಮಯದಲ್ಲಿ ಮೆಣಸು ಕದ್ದು ಆಟೋ ರಿಕ್ಷಾದಲ್ಲಿ (ಸುಮಾರು 40 ಕೆ.ಜಿ. ಮೌಲ್ಯ ರೂ. 8 ಸಾವಿರ) ಸಾಗಾಟ ಮಾಡಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಪಂಚಾಯಿತಿ ಕರಡಿಗೋಡು ಗ್ರಾಮದ ವ್ಯಾಪಾರಿ ಎ.ಎ. ಅಶೋಕ್ ಎಮಬವರು ಕೊಡ್ಲಿಪೇಟೆ ವ್ಯಾಪ್ತಿಯ ಮಾಗಡಹಳ್ಳಿ ಗ್ರಾಮದ ಬಸವರಾಜು ಎಂಬವರ ತೋಟದ ಕರಿಮೆಣಸಿನ ಫಸಲನ್ನು ಒಪ್ಪಂದ ಪತ್ರದ ಮುಖಾಂತರ ಖರೀದಿಸಿದ್ದರು. ಮೆಣಸಿನ ತೋಟವನ್ನು ಕಾವಲು ಕಾಯಲು ಕಾರ್ಮಿಕರಾದ ಅಲಿ, ಮಜೀದ್, ದೊಡ್ಡಕೊಡ್ಲಿ ಗ್ರಾಮದ ನಾಗೇಶ್, ಅನಿಸ್ ಅವರುಗಳನ್ನು ನೇಮಿಸಿದ್ದರು. ಸದರಿ ತೋಟದಲ್ಲಿ ಯಾರೋ ಮೆಣಸು ಕದ್ದು ಕುಯ್ಯುತ್ತಿರುವದು ಕಂಡುಬಂದು, ಮಂಗಳವಾರ ರಾತ್ರಿ ತೋಟಕ್ಕೆ ಬಂದು ನೋಡಿದಾಗ ಮೆಣಸು ಕದಿಯುತ್ತಿರುವದು ಕಾವಲುಗಾರರೇ ಎಂದು ತಿಳಿಯಿತು. ಕಾವಲುಗಾರರು ಮೆಣಸು ಚೀಲದೊಂದಿಗೆ ತೋಟದ ಬಳಿಯಲ್ಲೇ ನಿಲ್ಲಿಸಲಾದ ಆಟೋ ರಿಕ್ಷಾದಲ್ಲಿ ಪರಾರಿಯಾದರು. ಈ ಬಗ್ಗೆ ದೊರೆತ ಪುಕಾರಿನ ಮೇರೆಗೆ ಶನಿವಾರಸಂತೆ ಪೊಲೀಸರು ಇಂದು ಬೆಳಿಗ್ಗೆ ಆಟೋ ರಿಕ್ಷಾ (ಕೆಎ 12, ಎ-4943) ಪತ್ತೆ ಹಚ್ಚಿ, ಕರಿಮೆಣಸು, ಈರ್ವರು ಆರೋಪಿಗಳಾದ ನಾಗೇಶ್, ಅನಿಸ್ ಅವರುಗಳನ್ನು ಬಂಧಿಸಿದ್ದಾರೆ. ಸಹಾಯಕ ಸಬ್ಇನ್ಸ್ಪೆಕ್ಟರ್ ಬಿ.ಎಸ್. ಜನಾರ್ದನ್ ವಿಧಿ 379 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ. ಈರ್ವರು ಆರೋಪಿಗಳಾದ ಅಲಿ, ಮಜೀದ್ ತಲೆಮರೆಸಿಕೊಂಡಿದ್ದಾರೆ.