ಸಿದ್ದಾಪುರ, ಮಾ. 29: ತಿತಿಮತಿಯ ದೇವರಪುರದ ಬಳಿ ತಾರಿಕಟ್ಟೆ ನೆಲ್ಲಿಕಾಡುವಿನ ಕಾಲೇಜು ವಿದ್ಯಾರ್ಥಿನಿ ಸಫಾನಳ ಮನೆಯಲ್ಲಿ ದುಃಖ ಮಡುಗಟ್ಟಿದ್ದು ಮೃತ ಸಫಾನಳ ಆತ್ಮಕ್ಕೆ ಶಾಂತಿ ಕೋರಿ ಮೂರನೇ ದಿನದ ಪ್ರಾರ್ಥನೆ ಭಾನುವಾರ ಮೃತಳ ಸ್ವಗೃಹದಲ್ಲಿ ನಡೆಯಿತು. ಮೃತೆ ಮನೆಗೆ ‘ಶಕ್ತಿ' ಪ್ರತಿನಿಧಿ ಭೇಟಿ ನೀಡಿದ ಸಂದರ್ಭ, ತಂದೆ ಮುಸ್ತಫಾ ಅವರ ಕಣ್ಣಂಚಿನಲ್ಲಿ ಕಣ್ಣೀರು ಹೊರಬರುತಿತ್ತು. ಮಗಳನ್ನು ಕಳೆದು ಕೊಂಡಿರುವ ತಾಯಿ ಸೈನಾ ಮೊನ್ನೆಯಿಂದಲೇ ದುಃಖದಿಂದ ಮಲಗಿದ್ದಾರೆ. ಪ್ರಜ್ಞಾಶೂನ್ಯರಾಗಿದ್ದ ಕಾರಣ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಮಿತ ಆಹಾರವನ್ನು ಮಾತ್ರ ಸಂಬಂಧಿಕರು ಒತ್ತಾಯದ ಮೇರೆಗೆ ಸೇವಿಸುತ್ತಿದ್ದಾರೆ. ಗ್ರಾಮ ಕೂಡ ಶೋಕ ಸಾಗರದಲ್ಲಿ ಮುಳುಗಿರುವದು ಕಂಡುಬಂತು.
ಕಡು ಬಡತನದ ಮುಸ್ತಫ- ಸೈನಾ ದಂಪತಿಯ ಮೂರನೇ ಪುತ್ರಿ ಕಾಡಾನೆ ದಾಳಿಗೆ ಸಿಲುಕಿ ಮೃತ ಪಟ್ಟ ಸಫಾನಳು ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದಿದ್ದು ಜಿಲ್ಲೆಯ ಮುಸ್ಲಿಂ ಜನಾಂಗದ ಮಕ್ಕಳ ಪೈಕಿ 10ನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ. ಯಲ್ಲಿ ಜಿಲ್ಲೆಗೆ ರ್ಯಾಂಕ್‍ಗಳಿಸಿದ್ದಾಳೆ. ಈಕೆಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ತಾನು ಹೆಚ್ಚಿನ ವಿದ್ಯಾಭ್ಯಾಸ ಪಡೆದು ಮುಂದೆ ಪ್ರೊಫೆಸರ್ ಆಗಿ ತಂದೆ-ತಾಯಿ ಯನ್ನು ಚೆನ್ನಾಗಿ ನೋಡಿ ಕೊಳ್ಳುತ್ತೇನೆಂದು ಆಗ್ಗಿಂದಾಗೆ ಹೇಳಿ ಕೊಳ್ಳುತ್ತಿದ್ದಳು ಎಂದು ಆಕೆಯ ಮಾವ ಏರ್ಮು ದುಃಖದಲ್ಲಿ ತಿಳಿಸಿದರು.
ಗಾಬರಿಯಿಂದ ಹೊರಬರದ ಅಣ್ಣ
ಕಾಡಾನೆ ಧಾಳಿಯಿಂದ ಮೃತಪಟ್ಟ ಸಫಾನಳೊಂದಿಗೆ ಕಾಲೇಜಿಗೆ ತೆರಳುತ್ತಿದ್ದ ಆಕೆಯ ಸಹೋದರ ಶಕೀರ್ ಭಯಾನಕ ದೃಶ್ಯದಿಂದ ಇನ್ನೂ ದುಃಖದಿಂದ ಹೊರಬರದೆ ಚಿಂತೆಯಲ್ಲೇ ಕುಳಿತಿದ್ದಾನೆ. ಬೆದರಿರುವ ಶಕೀರ್ ಯಾರೊಂದಿಗೂ ಹೆಚ್ಚಾಗಿ ಮಾತನಾಡದೇ ಮೌನದಲ್ಲಿದ್ದಾನೆ.
ಗ್ರಾಮಸ್ಥರ ಆಕ್ರೋಶ
ಕಾಡಾನೆಯ ಧಾಳಿಯಿಂದ ಮೃತಪಟ್ಟ ದಿನದಂದು ಅರಣ್ಯ ಇಲಾಖಾಧಿಕಾರಿಗಳು ಬಂದು ಹೋದ ಬಳಿಕ ಇತ್ತ ಸುಳಿಯಲಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ಭಾಗದ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುತ್ತೇವೆಂದು ಹೇಳಿಕೆ ನೀಡಿದ ಅರಣ್ಯಾಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ್ಯ ವಹಿಸಿ ದ್ದಾರೆ. ಕೂಡಲೇ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಒತ್ತಾಯಿಸಿದರು.
- ಎ.ಎನ್. ವಾಸು