ಮಡಿಕೇರಿ, ಮಾ. 29: ಕೊಡಗು ಜಿಲ್ಲೆಯ ವಿಶಾಲ ಮಾದಾಪುರ ತೋಟಗಾರಿಕಾ ಕ್ಷೇತ್ರಕ್ಕೆ ಎರಡು ದಶಕಗಳ ಬಳಿಕ ಕಾಯಕಲ್ಪದೊಂದಿಗೆ ರೈತರಿಗೆ ಕರಿಮೆಣಸು ಸಹಿತ ಇತರ ಬೆಳೆಗಳನ್ನು ಕೃಷಿ ಮಾಡಲು ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ನೂರಾರು ಎಕರೆ ಕಾಡುಪಾಲಾಗಿದ್ದು, ಈ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ.ವಿಯೆಟ್ನಾಂ ಪದ್ಧತಿಕೊಡಗಿನಲ್ಲಿ ಅತೀ ಎತ್ತರಕ್ಕೆ ಬೆಳೆಯುವ ಸಿಲ್ವರ್ ಮರಗಳಿಗೆ ಕರಿಮೆಣಸು ಬಳ್ಳಿ ಹಬ್ಬಿಸುವದರಿಂದ ಇಳುವರಿ ಅಷ್ಟಾಗಿ ಬರುವದಿಲ್ಲ ಎಂದು ತಜ್ಞರ ಅಭಿಪ್ರಾಯ. ಹೀಗಾಗಿ ಕೊಡಗಿಗೆ ವಿಯೆಟ್ನಾಂ ಮಾದರಿ ಕರಿಮೆಣಸು ಕೃಷಿ ಮಾಡಿದರೆ ಇಳುವರಿ ಪ್ರಮಾಣ ಅಧಿಕಗೊಳ್ಳಲಿದೆ ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ವಿಯೆಟ್ನಾಂ ಪದ್ಧತಿಯಂತೆ ಆರೆಂಟು ಅಡಿಗಳಷ್ಟು ಸಿಮೆಂಟ್ ಕಂಬ ನಿಲ್ಲಿಸಿ ಅದಕ್ಕೆ ಈ ಕರಿಮೆಣಸು ಬಳ್ಳಿಗಳನ್ನು ಹಬ್ಬಿಸಲಾಗುತ್ತದೆ. ಆ ರೀತಿ ಹಬ್ಬಿದ ಬಳ್ಳಿಗಳು ಕಂಬದ ಗರಿಷ್ಠ ಎತ್ತರಕ್ಕೆ ತಲಪಿದೊಡನೆ ಮರಳಿ ಕೆಳಮುಖವಾಗಿ ಚಪ್ಪರದಂತೆ ಬಾಗುವದರಿಂದ ಫಸಲು ಅಧಿಕ ನೀಡಲಿದೆ. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಮಾದಾಪುರ ತೊಟಗಾರಿಕಾ ಕ್ಷೇತ್ರದಲ್ಲಿ 60 ಎಕರೆ ಪ್ರದೇಶದಲ್ಲಿ ಯೋಜನೆ ರೂಪುಗೊಳ್ಳುತ್ತಿದೆ.
ಮಾತ್ರವಲ್ಲದೆ ಪ್ರಸಕ್ತ ಮುಂಗಾರು ವೇಳೆಗೆ 2 ಲಕ್ಷಕ್ಕೂ ಅಧಿಕ ಕರಿಮೆಣಸು ಗಿಡಗಳನ್ನು ಸಿದ್ಧಗೊಳಿಸಿ ಕನಿಷ್ಟ ಮೊತ್ತಕ್ಕೆ ರೈತರಿಗೆ ವಿತರಿಸಲಾಗುವದು ಎಂದು ಮಾದಾಪುರ ತೋಟಗಾರಿಕಾ ಕ್ಷೇತ್ರದ ಪ್ರಬಾರ ಸಹಾಯಕ ಜಂಟಿ ನಿರ್ದೇಶಕ ವರದರಾಜ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಈಗ ಕಾಡುಪಾ ಲಾಗಿರುವ ಈ ಕ್ಷೇತ್ರವನ್ನು, ಉದ್ಯೋಗ ಖಾತರಿ ವ್ಯವಸ್ಥೆಯೊಂದಿಗೆ ಕಾಡು ತೆರವುಗೊಳಿಸಿ ಪುನಶ್ಚೇತನ ಗೊಳಿಸಲಾಗುತ್ತಿದೆ. 35 ಎಕರೆ ಪ್ರದೇಶದಲ್ಲಿ ಮಾವು, ಸಪೋಟ, ಕಿತ್ತಳೆ, ನೆಲ್ಲಿ, ಕರುಂಡ, ಲಿಚ್ಚಿ ಸಹಿತ ವಿವಿಧ ಫಲಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಈ ಸಂಬಂಧ ರೂ. 76.89 ಲಕ್ಷದಲ್ಲಿ (ಮೊದಲ ಪುಟದಿಂದ) ತೋಟಗಾರಿಕಾ ಕ್ಷೇತ್ರದ ತಡೆಗೋಡೆ (ಚೈನ್ ಲಿಂಕ್ ಬೇಲಿ) ನಿರ್ಮಾಣ ಹಾಗೂ ತುಂತುರು ನೀರಾವರಿಗಾಗಿ ಬೃಹತ್ ಕೃಷಿ ಹೊಂಡಗಳನ್ನು ಪೂರ್ಣ ಗೊಳಿಸಲಾಗಿದೆ. ಇಲ್ಲಿ ಆಂಥೋರಿಯಂ ಕೂಡ ಬೆಳೆದು, ಹಸಿರುಮನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಕಾಲಕಾಲಕ್ಕೆ ರೈತರಿಗೆ ಕಲ್ಪಿಸಲಾಗುತ್ತಿದೆ.
ಸಸ್ಯ ಕ್ಷೇತ್ರದ ಹಿನ್ನೆಲೆ : ಮಾದಾಪುರದಲ್ಲಿರುವ ಈ ವಿಶಾಲ ಸಸ್ಯ ಕ್ಷೇತ್ರವು ಒಟ್ಟು 246.85 ಎಕರೆ ಪ್ರದೇಶ ಹೊಂದಿದ್ದು, ಸರಕಾರಿ ಶಿಕ್ಷಣ ಸಂಸ್ಥೆ ಸೇರಿದಂತೆ ಎಕರೆಗಟ್ಟಲೆ ಜಾಗ ಆಶ್ರಯ ಮನೆಗಳಾಗಿ ಪರಿವರ್ತನೆಗೊಂಡಿದೆ. ಪ್ರಸಕ್ತ ಕಾಡುಪಾಲಾಗಿರುವ ಎಕರೆಗಟ್ಟಲೆ ಪ್ರದೇಶ ಒಳಗೊಂಡಂತೆ 221 ಎಕರೆಗೆ ಕಾಯಕಲ್ಪ ನೀಡಲಾಗುತ್ತಿದೆ.
1967ರಲ್ಲಿ ಖರೀದಿ : 1967ರಲ್ಲಿ ಕರ್ನಾಟಕ ಸರಕಾರವು ಈ ಎಕರೆ ಗಟ್ಟಲೆ ಪ್ರದೇಶವನ್ನು, ಚಿತ್ರದುರ್ಗದ ಶ್ರೀ ಮುರುಘ ಮಠದಿಂದ ಕೇವಲ ರೂ. 60 ಸಾವಿರ ಮೊತ್ತಕ್ಕೆ ಖರೀದಿಸಿದ್ದಾಗಿದೆ. ಇಲ್ಲಿ ರಾಜ್ಯದ ಪ್ರತಿಷ್ಠಿತ ತರಬೇತಿ ಶಾಲೆ ಇದ್ದುದನ್ನು ಇತ್ತೀಚೆಗೆ ಸರಕಾರ ಬೇರೆಡೆಗೆ ಸ್ಥಳಾಂತರಿಸಿತ್ತು.
ಮುಂದಿನ ಮೂರು ವರ್ಷದೊಳಗೆ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ತೋಟಗಾರಿಕಾ ಕ್ಷೇತ್ರವನ್ನಾಗಿ ರೂಪಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗುರುರಾಜ್ ಅವರು ಮಾಹಿತಿ ನೀಡಿದ್ದಾರೆ.