ಗೋಣಿಕೊಪ್ಪ, ಮಾ. 29: ಇತ್ತೀಚೆಗೆ ಕಳತ್ಮಾಡು ಹೊಸಕೋಟೆಯ ನಿವಾಸಿ ಕಾಯರತೋಡಿ ಮಾದಪ್ಪ ಅವರು ಅಭ್ಯತ್‍ಮಂಗಲದಲ್ಲಿ ಬೈಕ್ ಅಪಘಾತದಿಂದ ಮರಣ ಅಪ್ಪಿದ್ದರು. ಪ್ರಧಾನ ಮಂತ್ರಿಯವರ ಸುರಕ್ಷಾ ಯೋಜನೆಯ ವಿಮೆ ಪಾಲಿಸಿ ಯೋಜನೆಯಡಿ ಸರಕಾರದಿಂದ ಸೇರಬೇಕಾಗಿದ್ದ ರೂ. 2 ಲಕ್ಷ ಮೊತ್ತದ ವಿಮೆಯನ್ನು ಕಾವೇರಿ ಗ್ರಾಮಿಣ ಬ್ಯಾಂಕ್ ಗೋಣಿಕೊಪ್ಪಲು ಶಾಖೆಯ ಮುಖ್ಯ ವ್ಯವಸ್ಥಾಪಕ ವೇಣು ಹಾಗೂ ಪ್ರಮುಖರು ದಿ. ಮಂದಣ್ಣ ಅವರ ಪತ್ನಿ ಸಾವಿತ್ರಿ ಮತ್ತು ಮಗಳು ಭುವನರವÀರಿಗೆ ಹಸ್ತಾಂತರ ಮಾಡಿದರು.
ಸರಕಾರಗಳು ಯೋಜನೆಗಳನ್ನು ತಂದರೂ ಅದನ್ನು ಜನಸಾಮಾನ್ಯರಿಗೆ ತಲಪಿಸುವಂತಹ ಕೆಲಸ ಮತ್ತು ಅನುಷ್ಠಾನಗೋಳಿಸುವದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದ ವೇಣು ಅವರು, ಇಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿವೆ. ಆದರೆ ಇದರ ಪ್ರಯೋಜನ ಪಡೆದುಕೊಳ್ಳಲು ಪ್ರತಿಯೊಬ್ಬರು ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯುವಂತೆ ಆಗ್ರಹಿಸಿದರು.
ಮಾಜಿ ಜಿ.ಪಂ. ಸದಸ್ಯ ಕೊಲ್ಲಿರ ಧರ್ಮಜ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಕಾವೇರಿ, ಹೊಸೂರು ಗ್ರಾ.ಪಂ. ಅಧ್ಯಕ್ಷ ಗೋಪಿ ಚಿಣ್ಣಪ್ಪ, ಸದಸ್ಯರಾದ ಕಾವೇರಮ್ಮ, ಧನು ಪೂಣಚ್ಚ, ಹಾತೂರು ಮಾಜಿ ಉಪ ಪ್ರಧಾನ ನಂಜುಂಡ ಕುಮಾರ್, ಸ್ಥಾನೀಯ ಸಮಿತಿ ಅಧ್ಯಕ್ಷ ಕಂಬೀರಂಡ ಬೋಪಣ್ಣ, ಕಾರ್ಯದರ್ಶಿ ಚಂಡಂಡ ಬೋಪಣ್ಣ ಹಾಗೂ ಸಾರ್ವಜನಿಕರು ಹಾಜರಿದ್ದರು.