ಸೋಮವಾರಪೇಟೆ, ಮಾ. 29: ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಕೊಡಗಿನಲ್ಲಿ ನಡೆದ ಘಟನಾವಳಿ ಗಳನ್ನು ಪ್ರಾಥಮಿಕ ಶಾಲಾ ಪಠ್ಯ ಪುಸ್ತಕದಲ್ಲಿ ದಾಖಲಿಸುವ ಮೂಲಕ ಇಂದಿನ ಜನಾಂಗಕ್ಕೂ ಇತಿಹಾಸದ ಪರಿಚಯ ಮಾಡಿಕೊಡಬೇಕು ಎಂದು ಜಾನಪದ ಪರಿಷತ್‍ನ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರಳೀಧರ್ ಅಭಿಪ್ರಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್‍ನ ಆಶ್ರಯದಲ್ಲಿ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಶಾಂತಮಲ್ಲಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೊಡಗಿಗೆ ವೀರಶೈವ ರಾಜರ ಕೊಡುಗೆಗಳು’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ರಾಜರ ಆಳ್ವಿಕೆ ಕಾಲದಲ್ಲಿ ಇಲ್ಲಿನ ಜನರ ಶೌರ್ಯ, ಸಾಹಸ, ದೇಶಪ್ರೇಮ ಕುರಿತು ಸಾಕಷ್ಟು ಉಲ್ಲೇಖಗಳಿವೆ. ಇದರ ಕುರಿತು ಶಾಲಾ ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿ ತಿಳಿಯಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರ, ಶಿಕ್ಷಣ ತಜ್ಞರ ಸಮಿತಿ, ಇಲಾಖೆ ಉನ್ನತಾಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಕೊಡಗಿನಲ್ಲಿ ವೀರರಾಜೇಂದ್ರ ಒಡೆಯರ್ 57 ವೀರಶೈವ ಮಠಗಳನ್ನು ಸ್ಥಾಪಿಸಿ ಅವುಗಳಿಗೆ ಭೂಮಿಯನ್ನು ಜಹಗೀರಾಗಿ ಕೊಟ್ಟ ಹಿನ್ನೆಲೆಯಲ್ಲಿ ಇಂದು ಅನೇಕ ವಿದ್ಯಾಸಂಸ್ಥೆಗಳು ಸಮರ್ಥವಾಗಿ ವಿದ್ಯಾರ್ಥಿಗಳಿಗೆ ಅಕ್ಷರ ಕಾಯಕವನ್ನು ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‍ನ ತಾಲೂಕು ಘಟಕದ ಅಧ್ಯಕ್ಷ ಹೆಚ್.ಜೆ. ಜವರ ವಹಿಸಿದ್ದರು. ವೇದಿಕೆಯಲ್ಲಿ ವೀರಶೈವ ಸಮಾಜದ ಯಜಮಾನರಾದ ಕೆ.ಎನ್. ಶಿವಕುಮಾರ್, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ, ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ಎಸ್.ಡಿ. ವಿಜೇತ್ ಉಪಸ್ಥಿತರಿದ್ದರು. ಶಿಕ್ಷಕಿ ಎಲ್.ಎಂ. ಪ್ರೇಮ ಕಾರ್ಯಕ್ರಮ ನಿರ್ವಹಿಸಿದರು.